ದುಡ್ಡ್ಡಿಗಾಗಿ ದುಡ್ಡೇ ಮಾರುವ ಸರದಂಗಡಿಗಳು!

ಮೈಮೇಲಿನ ಹೆಣ ಭಾರದ ಬ್ಯಾಗುಗಳನ್ನು ಲಗುಬಗೆಯಿಂದ ರೂಮಿನಲ್ಲಿ ಎತ್ತು ಬಿಸಾಡಿದ ಗೆಳೆಯರೆಲ್ಲಾ ಮೊದಲು ಶಾಪಿಂಗ್ಗೆ ಪಲ್ಟನ್ ಬಜಾರ್ಗೆ ಹೋಗೋಣ ನಡಿಯಪ್ಪ, ಖರೀದಿ ಮಾಡೋದು ಸಾವ್ರ ಇದೆ ಎಂದು ಅವಸರ ಮಾಡುತ್ತಾ ನನ್ನ ಹೊರಡಿಸಿದರು.

ಡೆಹರಾಡೂನಿನ ಪಲ್ಟನ್ ಬಜಾರ್ ಮೈ ತುಂಬಾ ಅಂಗಡಿ ಮುಂಗಟ್ಟುಗಳನ್ನು ತುಂಬಿಕೊಂಡ ಮಾಕರ್ೆಟ್ ಪ್ರದೇಶ. ಸುಮಾರು ಎರಡು ಕಿಲೋ ಮೀಟರ್ ಉದ್ದಕ್ಕೆ ನಾಲಿಗೆ ಚಾಚಿರುವ ಇಲ್ಲಿ ಮಧ್ಯಮ ವರ್ಗದವರ ಅಚ್ಚು ಮೆಚ್ಚಿನ ಸಾಕಷ್ಟು ವಸ್ತುಗಳು ಅಂದುಕೊಂಡಿದ್ದಕ್ಕಿಂತ ಒಂದಿಷ್ಟು ಕಡಿಮೆ ಬೆಲೆಗೆ ಸಿಕ್ಕು ಆಸೆ ಆಶ್ಚರ್ಯ ಹುಟ್ಟಿಸುತ್ತವೆ. ಅದರಲ್ಲೂ ಇಂಡಿಯನ್ ಆಮರ್ಿಯ ಸೈನಿಕರು-ಆಧಿಕಾರಿಗಳು ಬಳಸುವ ಎಲ್ಲಾ ನಮೂನೆಯ ಬಟ್ಟೆ-ಶೂ-ಬ್ಯಾಗು-ಸ್ವೆಟರುಗಳಂತೂ ಚೌಕಾಶಿ ಮಾಡಿದಷ್ಟು ಕಡಿಮೆ ಬೆಲೆಗೆ ಇಳಿದು ಕೊಳ್ಳುಬಾಕತನವ ಹೆಚ್ಚಿಸುತ್ತವೆ. ಇಂಥ ಬಜಾರಿನ ಮಾಹಿತಿಯನ್ನು ಡೆಹರಾಡೂನಿಗೆ ಬರುವ ಮೊದಲೇ ಎಲ್ಲೆಲ್ಲಿಂದಲೋ ಸಂಗ್ರಹಿಸಿದ್ದ ನಾವು ಆ ದಿನ ಸಾಕ್ಷಾತ್ ದರೋಡೆಕೋರರಂತೆ ರಸ್ತೆಗಿಳಿದು ಎಲ್ಲಾ ಅಂಗಡಿಗಳನ್ನು ದುರುಗುಟ್ಟುತ್ತಾ ಸಾಗುತ್ತಿದ್ದೆವು.

ಅಷ್ಟರಲ್ಲಿ ನನ್ನ ನಜರು ಬಣ್ಣ-ಬಣ್ಣದ ಸರಗಳನ್ನು ನೇತಾಕಿದ್ದ ಅಂಗಡಿಯೊಂದರ ಮೇಲೆ ಅಚಾನಕ್ ಆಗಿ ಬಿದ್ದಿತ್ತು. ಚಿತ್ತಾರದ ಕಲಾಕೃತಿಗಳನ್ನ ಚೆಂದದ ಬಣ್ಣದ ಕಾಗದದಲ್ಲಿ ಮೂಡಿಸಿ ಹೆಣೆಯಲಾಗಿದ್ದ ಅವುಗಳಲ್ಲಿ ಏನೋ ಒಂದು ಪರಮಾಶ್ಚರ್ಯ ನನ್ನ ಕಣ್ಣಿಗೆ ಎದ್ದು ಕಾಣುತ್ತಿತ್ತು. ಹಾಗಿದ್ದರೆ ಇದನ್ನು ಯಾವ ವಸ್ತುವಿನಿಂದ ಮಾಡಿರಬಹುದು!? ನೋಡೋಣ ಎಂದು ಕುತೂಹಲದಿಂದ ಮತ್ತೊಂದಿಷ್ಟು ಹತ್ತಿರಕ್ಕೆ ಹೋಗಿ ನಿಂತೆ. ನಿಜವಾಗಿಯೂ ವಿಸ್ಮಯ ಎನಿಸಿತು. ಅದು ನಮಗೆಲ್ಲಾ ತುಂಬಾ ಪರಿಚಿತವಾದ ವಸ್ತುವೊಂದರಿಂದ ಮಾಡಲ್ಪಟ್ಟಿತ್ತು.!


ಅಂಗಡಿ ಮುಂದೆ ಮಾರಾಟಕ್ಕೆ ಸಜ್ಜಾದ ನೋಟಿನ ಹಾರಗಳು.

ನಿಜಕ್ಕೂ ನನ್ನ ಕಣ್ಣುಗಳನ್ನೇ ನಂಬಲಾಗದ ನಾನು ಒಮ್ಮೆಗೇ ಎಲ್ಲರಿಗೂ ಕೂಗಿಕೊಂಡೆ. `ಏಯ್ ಎಲ್ಲಾ ಬೇಗ ಬನ್ನಿ ಇಲ್ಲಿ. ಈ ವಿಚಿತ್ರದ ಹಾರ ಸ್ವಲ್ಪ ನೋಡಿ. ಇದು ಯಾವುದರಿಂದ ಮಾಡಿದ್ದಾರೆ ಅನ್ನೋದನ್ನ ಗಮನವಿಟ್ಟು ನೋಡಿ ಎಂದೆ. ನನ್ನ ಸದ್ದಿಗೆ ಓಗೊಟ್ಟು ಬಂದವರೆಲ್ಲರೂ ಅಲ್ಲಿ ನಿಂತು ನೇತಾಕಿದ್ದ ಹಾರಗಳನ್ನು ಕಂಡು ನನ್ನಂತೆಯೇ ಹೌಹಾರಿ ನಿಂತರು. ನನ್ನ ಪರಿಶೀಲನೆ, ಹಾಗು ಕೂಗಾಟವನ್ನು ಹಾಗೇ ಗಮನಿಸುತ್ತಿದ್ದ, ಅಂಗಡಿ ಮಾಲೀಕನೂ ಏನಾಯಿತೆಂದು ಹೊರಗೆ ಬಂದು ನಿಂತ. ನಮ್ಮ ಆಶ್ಚರ್ಯದ ನಡವಳಿಕೆಯಿಂದ ಅವನೇನೂ ವಿಚಲಿತನಾಗಿರಲಿಲ್ಲ. ವ್ಯಂಗದ ಸಣ್ಣ ನಗು ಚೆಲ್ಲುತ್ತಾ ಟೂರಿಸ್ಟ್ ಎಂದು ಗೊಣಗುತ್ತಾ ನಿಂತುಕೊಂಡ.

ತೂಗು ಹಾಕಿದ್ದ ಹಾರಗಳನ್ನು ನೋಡಿದ ಎಲ್ಲರೂ ಒಮ್ಮೆಗೇ ಕಕ್ಕಾಬಿಕ್ಕಿಯಾದೆವು. ಏಕೆಂದರೆ ಆ ಹಾರಗಳನ್ನು ಯಾವುದೋ ಮಾಮೂಲಿ ಬಣ್ಣದ ಪೇಪರ್ಗಳಿಂದ ಮಾಡಿರಲಿಲ್ಲ. ಬದಲಿಯಾಗಿ ರಿಸವರ್್ ಬ್ಯಾಂಕ್ ಆಫ್ ಇಂಡಿಯಾದ ಹೊಚ್ಚ-ಹೊಸ ಗರಿಗರಿಯಾದ ನೋಟುಗಳಿಂದ ತಯಾರಿಸಿದ್ದರು. ನೂರು ರೂಪಾಯಿಯ ನೋಟಿನ ಹಾರದಿಂದ ಹಿಡಿದು ಎರಡು ರೂಪಾಯಿಯ ನೋಟಿನ ತನಕದ ಹಾರಗಳ ರಾಶಿಯೇ ಅಲ್ಲಿ ತುಂಬಿ ಹೋಗಿದ್ದವು.

ನೋಟಿಗಾಗಿ ವ್ಯಾಪಾರ ಮಾಡುವ ಜನರನ್ನ ನಾವು ದಿನಾ ನೋಡುತ್ತೇವೆ. ಆದರೆ ನೋಟನ್ನೇ ಮಾರಿ ನೋಟು ಸಂಪಾದಿಸುವ ಈ ಜನರ ವರ್ತನೆಯೇ ನನಗೆ ವಿಚಿತ್ರವೆನಿಸಿತು. ಜನರ ದಿನ ನಿತ್ಯದ ವ್ಯವಹಾರಿಕ ಬಳಕೆಗೆಂದು ಸಕರ್ಾರ ಹೊಚ್ಚ ಹೊಸ ನೋಟುಗಳನ್ನ ಪ್ರಿಂಟು ಹಾಕಿಸುತ್ತದೆ. ಆಥರ್ಿಕ ವಹಿವಾಟಿಗಲ್ಲದೆ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಇವುಗಳನ್ನು ಬಳಸುವುದು ನಿಷಿದ್ದ. ಹೀಗಿರುವ ಇವುಗಳನ್ನು ಇವರು ಹ್ಯಾಗೆಂದರೆ ಹಾಗೆ ಮಡಿಸಿ ಬೇಕಾಬಿಟ್ಟಿಯಾಗಿ ಸ್ಟೆಪ್ಲರ್ ಪಿನ್ನು ಹೊಡೆದು ರೂಪಿಸಿದ್ದ ಹೂವಿನ-ನವಿಲಿನ ಆಕೃತಿಗಳನ್ನು ರಚಿಸಿರುವ ಇವರ ಇಡೀ ಕಲಾವಂತಿಕೆ ಬಗ್ಗೆಯೇ ನನಗೆ ಸಿಟ್ಟು ಬಂದಿತು.

ಇಂಥ ಹಾರಗಳನ್ನ ಯಾರಿಗಾಗಿ ಮಾಡಿಟ್ಟಿದ್ದೀರಿ.ಇವುಗಳನ್ನು ಯಾರು ಕೊಳ್ಳುತ್ತಾರೆಂದು ಅಂಗಡಿಯವನಿಗೆ ಕೇಳಿದೆ.ಅದಕ್ಕವನು ಅದೆಲ್ಲಾ ಇಲ್ಲಿನ ರಿವಾಜು. ಮದುವೆ ಸಮಯದಲ್ಲಿ ಗಂಡಿಗೆ ಈ ದುಡ್ಡಿನಿಂದ ನೇಯ್ದ ಹಾರವನ್ನ ಹಾಕ್ತಾರೆ. ಅವರವರ ಸ್ಥಿತಿಗೆ ತಕ್ಕಂತೆ ಬೇರೆ ಬೇರೆ ರೈಟಿನ ಹಾರಗಳನ್ನ ಖರೀದಿಸುತ್ತಾರೆ. ಬಡವರು ಎರಡು ರೂಪಾಯಿ ಪೋಣಿಸದ ಹಾರಗಳಿಂದ ಹಿಡಿದು ಹೆಚ್ಚ್ಚೆಂದರೆ ಹತ್ತು ರೂಪಾಯಿ ತನಕ ಮಾಡಿದ ಹಾರ ಖರೀದಿಸುತ್ತಾರೆ. ಐನೂರು-ಸಾವಿರ ರೂಪಾಯಿಗಳಿಂದ ಮಾಡುವ ಹಾರಗಳನ್ನ ಶ್ರೀಮಂತರು ಮೊದಲೇ ಆರ್ಡರ್ ಕೊಟ್ಟು ಮಾಡಿಸುತ್ತಾರ ಎಂದ.
ಆಗ ನಮ್ಮ ಕವಿ ಮಿತ್ರ ವಿಕ್ರಮ್ವಿಸಾಜಿ `ಸಾರ ನಮ್ಮ ಕಡಿ ಸತ್ತವಂಗೆ ಮಾತ್ರ ಈ ನಮೂನಿ ಹಾರ ಮಾಡಿ ಹಾಕ್ತಾರೆ. ಎಂದರು. ಆ ಮಾತಿಗೆ ನಾವೆಲ್ಲ ಮುಸುಮುಸಿ ನಕ್ಕೆವು. ಕನ್ನಡ ಅರ್ಥವಾಗದ ಅಂಗಡಿಯವನು ಇವರೆಲ್ಲಾ ನನ್ನನು ಕಿಚಾಯಿಸುತ್ತಿದ್ದಾರೆಂದೇ ಭಾವಿಸಿ ಅಂಗಡಿಯೊಳಗೆ ನುಸುಳಿಕೊಂಡ. ಮತ್ತೆ ಕತ್ತೆತ್ತಿ ಬಜಾರಿನ ಬೀದಿ ಕಡೆ ನೋಡಿದರೆ ನೋಟಿನ ಸರಗಳನ್ನೇ ಸಾಲಾಗಿ ತಮ್ಮ ಮುಖಗಳ ಮೇಲೆ ಹೇರಿಕೆೊಂಡ ಅಂಗಡಿಗಳ ಮಹಾಮೇಳವೇ ಅಲ್ಲಿ ಎದ್ದು ಕಾಣುತ್ತಿತ್ತು.
ಬ್ಯಾಂಕಿನಿಂದ ಆಗಷ್ಟೇ ಬಿಡುಗಡೆಯಾಗುವ ಗರಿಗರಿ ನೋಟುಗಳನ್ನೇ ಹುಡುಕಿ ತಂದು ಕ್ರಮಸಂಖ್ಯೆಗಳಿಗೆ ಅನುಗುಣವಾಗಿ ಇವರು ಹಾರ ತಯಾರಿಸುತ್ತಾರೆ. ದುಡ್ಡು ಕೊಟ್ಟು ದುಡ್ಡನ್ನೇ ಖರೀದಿ ಮಾಡುವ ಇಲ್ಲಿನ ಈ ವಿಚಿತ್ರ ವ್ಯಾಪಾರ ನಮಗಂತೂ ಆಶ್ಚರ್ಯವೇ ಅನ್ನಿಸಿತು.

ಕಲೀಮ್ ಉಲ್ಲಾ.

Kaleem
ನಾನೀಗ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೇನೆ. ನಾನು ಮೇಷ್ರೇ ಆಗಬೇಕೆಂದು ಬಯಸಿದವನು. ಬಾಲ್ಯದಲ್ಲಿ ಸಿಕ್ಕಾಪಟ್ಟೆ ಕನ್ನಡ ಸಿನಿಮಾಗಳ ನೋಡಿ ಪೋಲೀಸ್ ಇನ್ಸ್ಪೆಕ್ಟ್ಸರ್ ಆಗಬೇಕೆಂದುಕೊಂಡೆ. ಸಧ್ಯ ಅದೃಷ್ಟ ಚೆನ್ನಾಗಿತ್ತು ಆಗಲಿಲ್ಲ. ನನಗೆ ನನ್ನ ವಿದ್ಯಾರ್ತಿಗಳು ನನಗಿಂತ ದೊಡ್ಡವರಾಗಿ ಬಾಳಿ ಬದುಕುವುದು ನೋಡಿ ಸಂತೋಷವಾಗುತ್ತೆ. ಅದೇ ನನಗೆ ಹೆಚ್ಚು ತೃಪ್ತಿ ಕೊಟ್ಟಿದೆ. ತೇಜಸ್ವಿಯವರ ಕಥೆಗಳ ಓದಿ ಕ್ಯಾಮೆರಾ ಹುಚ್ಚು ಹತ್ತಿಸಿಕೊಂಡು ಬಹಳ ದುಡ್ಡು ಕಳೆದುಕೊಂಡು ಒಂದಿಷ್ಟು ಕಲಿತಾಗಿದೆ. ಅದರ ಜೊತೆ ನಾಟಕದ ಹುಚ್ಚು ಬೇರೆ. ಇವೆಲ್ಲಾ ಹಣ ಕಳೆದುಕೊಂಡು ಜೀವನದಲ್ಲಿ ಪಡೆಯುವ ವಿಶಿಷ್ಟ ಅನುಭವಗಳು. ಗೆಳೆಯರ ಜೊತೆ ಕಾಡು ಮೇಡು ಅಲೆಯುವುದ, ರುಚಿಯಾದ ಊಟ ಸಿಗುವ ಮನೆ,ಹೋಟೆಲ್ಲುಗಳ ವಿವರ ಸಂಗ್ರಹಿಸುವುದು, ಗೆಳೆಯರ ಕಾಡಿಸಿ-ನಗಿಸಿ ಅವರ ಜೊತೆ ಕಾಲಕಳೆಯುವುದು ನನಗಿಷ್ಟ. ಗೆಳೆಯ ನೂರ್ ಸಿಕ್ಕರೆ ಮಾತ್ರ ಕೆಲವೊಂದು ವಿಶೇಷ ಚಟಗಳು ನನ್ನ ಮುತ್ತಿಕೊಳ್ಳುವುದುಂಟು. ಅದರಲ್ಲಿ ಶಾಪಿಂಗ್ ಒಂದು. ಕೊಳ್ಳುವುದು ಕಡಿಮೆಯಾದರೂ ಬೆಂಗಳೂರಿನ ಗಲ್ಲಿಗಲ್ಲಿ ಸುತ್ತುವುದು ತುಂಬಾ ಜಾಸ್ತಿ. ಅವನ ಜೊತೆ ಹೀಗೆ ಅಂಡಲೆಯುವುದು ನನಗೆ ಪರಮಾನಂದ. ಒಂದಿಷ್ಟು ಓದುತ್ತೇನೆ. ಬರೆಯುತ್ತೇನೆ. ನಿದ್ದೆ ಮಾಡುವುದು ಎಂದರೆ ನನಗೆ ಪಂಚಪ್ರಾಣ. ಹಕ್ಕಿಗಳ ಒಳ್ಳೆ ಫೋಟೋ ತೆಗೆಯಬೇಕು ಎಂಬ ಆಸೆ ಬಹಳ ಇದೆ. ಇದಕ್ಕೆ ಬೇಕಾದ ಭಾರಿ ಕ್ಯಾಮೆರಾ ಕೊಳ್ಳುವ ಶಕ್ತಿ ಇನ್ನೂ ಬಂದಿಲ್ಲ. ಇರೋ ಲಾಟ್-ಪೂಟ್ ಕ್ಯಾಮೆರಾದಲ್ಲೆ ಏನೇನೋ ತೆಗೀತೀನಿ. ನಾನು ಪೋಟ್ರೈಟ್ ಚಿತ್ರಗಳನ್ನು ಚೆನ್ನಾಗಿ ತೆಗೆಯುತ್ತೇನೆ ಅಂತ ನನ್ನ ಅಣ್ಣ ಮತ್ತು ನಮ್ಮ ನಾಗರಾಜ ಹೇಳುತ್ತಾರೆ. ಅದನ್ನು ನಾನು ನಿಜ ಅಂತ ನಂಬಿದ್ದೀನಿ. ಇನ್ನು ಒಂದಿಷ್ಟು ಒಳ್ಳೆಯ ಗೆಳೆಯರನ್ನೂ, ಉತ್ತಮ ಶಿಷ್ಯರನ್ನು, ಪ್ರೀತಿಯ ಪುಸ್ತಕಗಳನ್ನು, ನೋಡದ ನಾಡನ್ನು ಕಣ್ಣಲ್ಲಿ ಮನಸ್ಸಲ್ಲಿ ತುಂಬಿಕೊಳ್ಳಬೇಕು ಅನ್ನುವ ಆಸೆ ಇದೆ. ಎಲ್ಲರಿಂದ ಏನೇನೋ ಕಲಿಯೋದು ಇದ್ದೇ ಇರುತ್ತೆ. ನಾನೂ ಇನ್ನೂ ಕಲೀಬೇಕಿದೆ. ನನಗಿಂತ ಹೆಚ್ಚು ಕಂಪ್ಯೂಟರ್ ಹಾಗು ಇಂಟರ್ನೆಟ್ನಲ್ಲಿ ಪಳಗಿರುವ ಮತ್ತು ಒಳ್ಳೆ ಅಭಿರುಚಿಯನ್ನು ಛಾಯಾಚಿತ್ರದಲ್ಲಿ ಮತ್ತು ಬರವಣಿಗೆಯಲ್ಲಿ ಇಟ್ಟುಕೊಂಡಿರುವ ಶಿಷ್ಯ ನಾಗ್ಸ್ ಹಾಗೂ ತುಂಬಾ ಬುದ್ಧಿವಂತ ಮಿತ್ರ ಲಿವಿನ್ ಲಾರೆನ್ಸ್ ಅವರು ಎಂಥದ್ದೋ ಕಲೈಡೋಸ್ಕೋಪ್ ಅನ್ನೋ ಒಂದು ಅಂತರ್ತಾಣ ಮಾಡಿದ್ದಾರೆ. ಸದೈ ಅವರು ಹೇಳುವುದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ಕಂಪ್ಯೂಟರ್ ಜ್ಞಾನ-ಶಿಸ್ತು-ತಿಳಿವಳಿಕೆ ನನಗಿಲ್ಲ. ಅವರ ನಿಸ್ವಾರ್ಥ ಮತ್ತು ಕಳಕಳಿಯ ಈ ಪ್ರಯತ್ನಕ್ಕೆ ಶುಭವಾಗಲಿ ಅಂತ ಹಾರೈಸುತ್ತೇನೆ. ಅವರಿಂದ ಪರಿಸರ ಪ್ರೇಮ ಜನರಲ್ಲಿ ಹಾಗೂ ಜಡ ವ್ಯಕ್ತಿಗಳಲ್ಲಿ ಇನ್ನಾದರೂ ಅಧಿಕವಾಗಲಿ ಎಂಬುದು ನನ್ನ ಆಶಯ.