ನನ್ನನು ‘ಹಿಂಡು ಸೇರದ ಕಾಗೆ’ ಎಂದ ಚಂದ್ರಣ್ಣ

-

The Lone Rider

ಮಾತಿನ ಚತುರ ಚಂದ್ರಣ್ಣ ನನ್ನ ಸ್ನೆಹಿತ ಚೇತನನ ಊರಾದ ಅರಳಿಕೆರೆಯವರು. ಚಂದ್ರಣ್ಣನ ಮಾಮೂಲಿ ಮಾತಿನ ರೀತಿ – ಹಳ್ಳಿಯ ಪೌರಾಣಿಕ ನಾಟಕದ ಸಂಭಾಷಣೆಯನ್ನು ಹೋಲುತ್ತೆ. ಚಂದ್ರಣ್ಣ ವೃತ್ತಿಯಲ್ಲಿ ತೆಂಗಿನಕಾಯಿ ಕೀಳುವವರು. ವಿಶೇಷವೆಂದರೆ ಅವರು ಒಮ್ಮೆಯೂ ಕೂಡ ಮರವನ್ನು ಹತ್ತಿಯೇ ಇಲ್ಲವಂತೆ. ಮರ ಹತ್ತಲು ಬಾರದಂತೆ ಚಂದ್ರಣ್ಣ 49 ವರ್ಷ ವಯಸ್ಸಿನ, ಬೊಕ್ಕ ತಲೆಯ ವ್ಯಕ್ತಿ. ಅವರ ಮಾತಿಗೆ ವಿಶೇಷತೆಯನ್ನು ದೊರಕಿಸಲು ಚಂದ್ರಣ್ಣ ಆವಾಗವಾಗ ಗ್ರಾಂಥಿಕ ಕನ್ನಡವನ್ನೂ ಬಳಸುತ್ತಾರೆ. ಅದು ನನಗೆ ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನೆನಪಿಸಿತು. ಕರ್ನಾಟಕದ ಈ ಭಾಗದಲ್ಲಿ ಜನತಾ ದಳ (ಜ್ಯಾತ್ಯಾತೀತ ?) ಪಕ್ಷದ ಪ್ರಾಭಲ್ಯತೆ ಇರಬಹುದೆಂದೂ, ಅದರಿಂದಲೇ ಚಂದ್ರಣ್ಣ ಕುಮಾರಸ್ವಾಮಿಯವರ ಮಾತಿನ ರೀತಿಯನ್ನು ಅನುಕರಿಸುತ್ತಿರಬಹುದೆಂಬ ಸಂದೇಹದಿಂದ ನಾನು ‘ನೀವು ಕುಮಾರಸ್ವಾಮಿಯವರ ಫ್ಯಾನಾ?’ ಅಂತ ಕೇಳಿಯೇ ಬಿಟ್ಟೆ. ಚತುರ ಚಂದ್ರಣ್ಣ ಮಾತನ್ನು ಕೇಳಿಸಿ ಕೊಂಡರೋ ಇಲ್ಲವೋ ”ನನಗೂ ಮತ್ತು ಕುಮಾರಸ್ವಾಮಿಯವರಿಗೂ Head and shoulder ನಲ್ಲಿ ಮಾತ್ರ ಸಾಮ್ಯತೆ ಇದೆ ಮತ್ಯಾವುದರಿಂದಲೂ ಇಲ್ಲ” ಎಂದುಬಿಟ್ಟರು. ನಂತರದ ಹದಿನೈದು ನಿಮಿಷ ಕುಮಾರಸ್ವಾಮಿಯವರ ಆಡಳಿತ ಅವಧಿ ಮತ್ತು ಅಧಿಕಾರ ಹಸ್ತಾಂತರ ಕಾಲದಲ್ಲಿ ನೆಡದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಗಹನವಾಗಿ ಮಾತಾಡಿದರು. ಹಳ್ಳಿಯವರಿಗಿರುವ ರಾಜಕೀಯ ಪ್ರಜ್ಞೆ ನನ್ನನು ಮೌನವಾಗಿರಿಸಿತು.

ಹೆಡ್ ಅಂಡ್ ಶೋಲ್ಡರ್ ಥರ ಚಂದ್ರಣ್ಣ ಅನೇಕ ಪದಗಳನ್ನು ಬಳಸುವುದರಿಂದ ಹಳ್ಳಿಯಲ್ಲಿ ಅವರೊಬ್ಬ ವಿಶೇಷ ವ್ಯಕ್ತಿ. ಎಲ್ಲೋ ಕಾಯಿ ಕೆಡವುತ್ತಿರೋ ಚಂದ್ರಣ್ಣನಿಗೂ, ಇನ್ನೆಲ್ಲೋ ಫೋಟೋ ತೆಗೆಯುತ್ತಿರೋ ನನಗೂ, ನನ್ನ ಕ್ಲಾಸಿಕ್ 500 ದೆಸೆಯಿಂದ, ಭೇಟಿ ಮಾಡುವ ಅವಕಾಶ ಒದಗಿಬಂತು. ಸ್ನೇಹಿತ ಚೇತನ್ ಸುಮಾರು ಸಾರಿ ಅವನೂರಿಗೆ ಕರೆದಿದ್ದರೂ, ನಾನು ನೆಪಗಳನ್ನು ಹೇಳಿ ಹೋಗಿಯೇ ಇರಲಿಲ್ಲ. ಈಸಲ ಅವನು ಕರೆದಾಗ ಆದಷ್ಟು ಬೇಗ 500 ಕಿಲೋಮೀಟರ್ಗಳನ್ನು ದಾಟಬೇಕೆಂದು ಬರುತ್ತೇನೆ ಎಂದಿದ್ದೆ. ಇಂಥ ನನ್ನ ನಡವಳಿಕೆಗಳಿಂದ ನಾನೊಬ್ಬ ಸ್ವಾರ್ಥಿ ಎಂಬ ಭಾವನೆ ನನ್ನ ಕೆಲ ಸ್ನೇಹಿತರಲ್ಲಿದೆ.

ನಾವು ಆರಳಿಕೆರೆ ತಲುಪುವಷ್ಟರಲ್ಲಿ ಕತ್ತಲಾಗಿತ್ತು. ಕಣ್ಣಿಗೆ ರಾಚುವಂತಹ ನನ್ನ ಗಾಡಿ ಊರಿನ ಯಾರ ಗಮನಕ್ಕೂ ಬರಲಿಲ್ಲ. ಚೇತನ ನನ್ನನು ” ಬಾ ನಿನಗೆ ಒಂದು interesting Character ಪರಿಚಯಿಸುತ್ತೇನೆ” ಎಂದು ಹಳ್ಳಿಯ ಓಣಿಗಳ್ಳಲ್ಲಿ, ಕತ್ತಲಲ್ಲಿ ಕರೆದುಕೊಂಡು ಹೋದ. ಒಂಬತ್ತು ಘಂಟೆಯ ಹೊತ್ತಿನಲ್ಲಿ ಆ ಹಳ್ಳಿಯಲ್ಲಿ ಯಾರು ಹೊರಗಡೆ ಓಡಾಡುತ್ತಿರಲ್ಲಿಲ್ಲ. ಕೇಬಲ್ ಟೀವೀಯ ಮನರಂಜನಾ ಕಾರ್ಯಕ್ರಮ ಒಂದನ್ನು ವೀಕ್ಷಿಸುತ್ತಾ ಇದ್ದ ಚಂದ್ರಣ್ಣನನ್ನು ಚೇತನ್ ಬಾಗಿಲು ಬಡಿದು, ತೊಂದರೆ ಕೊಟ್ಟು, ಕರೆದ. ಮುಖ್ಯವಾಗಿ ಚೇತನ್ ನನ್ನ ಗಾಡಿಯ ಬಗ್ಗೆ ಹೊಗಳ ಬೇಕಿತ್ತು . ಚಂದ್ರಣ್ಣನಿಗೆ ನೀವು ಬೆಳಗ್ಗೆ ಬಂದು ನೋಡಲೇ ಬೇಕೆಂದು ಹೇಳಿ ಕತ್ತಲಲ್ಲಿ ವಾಕಿಂಗ್ ಹೊರಟೆವು. ಚೇತನ್ ಬರಿಗಾಲಲ್ಲಿ ಇದ್ದ. ಮುಂದಿನ ವಾರ ಶಬರಿಮಲೆ ಯಾತ್ರೆಗೆ ಹೊರಟ್ಟಿದ್ದ ಅವನು ಬರಿಗಾಲಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳುತ್ತಿದ್ದ. ಆ ರಾತ್ರಿ ಸುಮಾರು ಹೊತ್ತು ನೆಡದು ನಂತರ ವಾಪಸ್ಸು ಬಂದು ಮಲಗಿದೆವು.

ನಾನು ಬೆಳಗ್ಗೆ ಎದ್ದು ಹೊರಗಡೆ ಬಂದೆ, ಅಷ್ಟರಲ್ಲಿ ನನ್ನ ಗಾಡಿಯ ಸುತ್ತ ಸುಮಾರು ಜನ ಸೇರಿ, ಅದನ್ನು ವಿಮರ್ಶೆ ಮಾಡುತ್ತಾ ಇದ್ದರು. ನನನ್ನು ಕಂಡೊಡನೆ ಒಂದು ಹೆಂಗಸು “ಏನಪ್ಪಾ? ಒಂದೇ ಸೀಟ್ ಇದೆ, ನಿಮ್ ಹೆಂಗಸರನ್ನ ಹೆಂಗ್ ಕರ್ಕೊಂಡ್ ಹೋಗ್ತೀರಾ ? “ಎಂದು ಕೇಳಿಯೇ ಬಿಟ್ಟರು. ನಾನು ತಪ್ಪಿಸಿಕೊಳ್ಳಲು “ನಂಗಿನ್ನು ಮದ್ವೇನೆ ಆಗಿಲ್ಲ” ಎಂದೆ. ಈಗಲ್ಲ ಅಂದ್ರು ಮುಂದುಕ್ಕೆ ಬರಲ್ವಾ” ಎಂದು ಮಾತು ಮುಂದುವರಿಸಿದರು. “ಅವಳಿಗೂ ಒಂದು ಇದೆ ಥರದ ಗಾಡಿ ಕೊಡುಸ್ತಿನಿ ಬುಡಿ” ಎಂಬ ನನ್ನ ಪ್ರತ್ಯುತ್ತರಕ್ಕೆ ಅವರು ತತ್ತರಿಸಿ ಹೋದರು. “ಈಗಿನ್ ಹುಡುಗ್ರು ಬಾಳ ಕೆಟ್ಟು ಹೋಗಿದ್ದಾರೆ ” ಅಂತ ಗೊಣಗಿಕೊಂಡಿದ್ದು ಕೇಳಿಸಿತು. ಗಂಡಸರು ಗಾಡಿಯ ಮೈಲೇಜ್ ಬಗ್ಗೆ ಕೇಳಿದರು. ಉತ್ತರ ಕೇಳಿ ದಂಗಾದರು.

ಸುಮಾರು 12 ಗಂಟೆಯ ಹೊತ್ತಿಗೆ ಚಂದ್ರಣ್ಣ ಕೆಲಸ ಮುಗಿಸಿ ಚೇತನ್ ಮನೆಯ ಹತ್ತಿರ ಬಂದರು. ಗಾಡಿಯನ್ನು ಕಂಡೊಡನೆಯೇ “ಆಹಾ! ಎಂಥ ಚೆಲುವಿನ ವಾಹನವಿದು ” ಎನ್ನುತ್ತಾ ಬೈಕ್ ಅನ್ನು ಒಂದು ಸುತ್ತಾಕಿ, ಮುಖದಲ್ಲಿ ಅಸಮ್ಮತಿಯನ್ನು ಪ್ರದರ್ಶಿಸುತ್ತಾ, ಎಲ್ಲ ಚೆನ್ನಾಗಿದೆ ಆದ್ರೆ ಹಿಂದ್ಗಡೆ ಸೀಟ್ ಇಲ್ದೆ ಬೋಳ ಕಾಣ್ತದೆ’ ಎನ್ನುತ್ತಾ ಗಾಡಿಯ ಪಕ್ಕ ಸುಮಾರು ದೂರದಲ್ಲಿ ಕುಳಿತುಕೊಂಡರು. ಚಂದ್ರಣ್ಣ ಎರಡನೇ ಸೀಟು ಕೂರಿಸುವಂತೆ ಒಪ್ಪಿಸಲು ಪ್ರಯತ್ನ ಪಡುತ್ತಿದ್ದರು ನಾನು ಒಪ್ಪಿಕೊಳ್ಳದೆ ವಾದಿಸುತ್ತಲೇ ಇದ್ದೆ. ” ನೀನು ಗುಂಪು ಸೇರದ ಕಾಗೆ ಎಂದು ನಿನ್ನ ಬೈಕ್ ನೋಡಿದಾಗಲೇ ಗೊತ್ತಾಯ್ತು, ಇನ್ನು ವಾದ ಮಾಡಿ ಪ್ರಯೋಜನವಿಲ್ಲ ಬಿಡು” ಎನ್ನುತ್ತಾ, ಚೇತನನನ್ನು ಬಾರೋ ಆ ಮರದ ಏಳನೀರ್ ಕುಡಿಸಿದ್ರೆ ಯಾರ್ರಾದು ‘ಹೋಂ ಅಪ್ಲೈಯನ್ಸಸ್’ ಬೇಕು ಅಂತ ಕೇಳ್ತಾರೆ. ನಿನ್ನ ಫ್ರೆಂಡ್ಗೂ ಅದರ್ ರುಚಿ ತೋರ್ಸೇ ಬಿಡಾನ” ಅಂತ. ಕೆಲ ದಿವಸಗಳ ಹಿಂದೆ ಮದುವೆಯೇ ಬೇಡ ಅಂತ ಹಠ ಹಿಡಿದಿದ್ದ ಚೇತನ್ ಅದ್ಯಾವುದೋ ಮರದ ನೀರು ಕುಡಿದೆ ಮದುವೆ ಆದ ಅಂತ ಹೇಳುತ್ತಾ ತೆಂಗಿನ ತೋಟದ ಕಡೆ ಕಾಯಿ ಕೀಳುವ ಜವಣಿಗೆ ಎತ್ತಿಕೊಂಡು ನಡೆದರು. ನನ್ನ ಬೈಕ್ ಸೃಷ್ಟಿಸಿದ ಪ್ರಹಸನ ನೆನೆದು ನನಗೂ ನಗು ಬಂತು.

ಲೇಖನ ಮತ್ತು  ಛಾಯಚಿತ್ರದ ಹಕ್ಕುಗಳು :  ಭಾನು ಪ್ರಕಾಶ ಚಂದ್ರ

Image credits: The copyright for the images used in this article belong to their respective owners. Best known credits are given under the image. For changing the image credit or to get the image removed from Caleidoscope, please contact us.

LEAVE A REPLY

Please enter your comment!
Please enter your name here

INSPIRING READS

TRENDING TOPICS

Featuring Indian Artists
Explore Indian Art Galleries
Explore Indian Folk Art Forms
Explore Indian Folk Dance Forms
Explore Indian Crafts
Explore Indian Fabric Art Forms