‘ನಿರುತ್ತರದ ಉತ್ತರ – ರಾಜೇಶ್ವರಿತೇಜಸ್ವಿ’ (ತೇಜಸ್ವಿ-ಹಕ್ಕಿ ಮನೆ-ನಿರುತ್ತರ)

-

scooter-tejasvi-home

ತೇಜಸ್ವಿಯವರು ಇದ್ದಾಗಲೇ ಅವರ ಮನೆಗೊಮ್ಮ ಹೋಗಿ ಬರಬೇಕೆಂಬಾಸೆ ಬೆಟ್ಟದಷ್ಟ್ಟಿತ್ತು. ಆದರೂ, ಅದ್ಯಾಕೋ ಸಾಧ್ಯವೇ ಆಗಿರಲಿಲ್ಲ. ಹೋಗುವ ಆಸೆ ಇದ್ದರೂ, ದೈರ್ಯವಿರಲಿಲ್ಲ. ಹೋಗೋಣ ಅಂದು ಕೊಂಡಗೆಲ್ಲಾ ಜನ ಥರಾವರಿಯಾಗಿ ಹೆದರಿಸೋರಿಸಿ ಬಿಡೋರು. ಅದ್ಯಾರೋ ತೇಜಸ್ವಿ ಅವರನ್ನ ಮಾತಾಡಿಸೋಕೆ ಅಂತ ಹೋಗಿ ಬೈಸಿಕೊಂಡು ಬಂದರಂತೆ, ಇನ್ನೊಬ್ಬನಿಗೆ, ಗದ್ದೆಯಲ್ಲಿ ಕೆಲಸ ಮಾಡ್ತಿದ್ದಾಗ ಹೋಗಿ ಅಟೋಗ್ರಾಫ್ ಕೇಳ್ದ ಅಂತ `ಹೋಗ್ತೀಯೋ ಇಲ್ಲವೋ..ನನಮಗನೇ .. ಅಂತ ಗುದ್ಲೀ ತಗೊಂಡು ಬೆರಸ್ಕೊಂಡ್ ಬಂದಿದ್ದರಂತೆ, ಅಂತೆಲ್ಲಾ ಕೇಳಿ ನಮ್ಮ ಉತ್ಸಾಹವೇ ಹಾರಿಹೋಗಿತ್ತು.

“ಅವುರು ಬಾಳ ಮೂಡಿ, ಸಿಕ್ಕಾಪಟ್ಟೆ ಬೈತಾರೆ, ಜನರ ತಲೆ ಕಂಡ್ರೆ ಅವರಿಗಾಗಲ್ಲ, ಸುಮ್ಮನೆ ಯಾಕೆ ಅಷ್ಟು ದೂರ ಹೋಗಿ ಉಗಿಸಿಕೊಂಡು ಬರ್ತೀರಿ. ಬಾಯಿ ಮುಚ್ಕೊಂಡು ಅವುರು ಬರೆದಿರೋದನ್ನ ಓದ್ರಿ ಸಾಕು ಅಂತ ಒಂದಿಷ್ಟು ಜನ ಉಚಿತ ಸಲಹೆ ಕೊಟ್ಟ ಮೇಲಂತೂ, ನಾನು ಹೆದರಿ ಕಾಯಂ ಆಗಿ ಸುಮ್ಮನಾಗಿ ಬಿಟ್ಟಿದ್ದೆ. ಆದರೂ ಆಸೆ ಬಿಟ್ಟಿರಲಿಲ್ಲ.

ಅವರ ಕಥಾನುಭವಗಳಲ್ಲಿ ಅನುರಣಿಸುವ ಕಾಫಿ ತೋಟ, ಅವರ ಮನೆ, ಪ್ಯಾರಾ-ಮಾರಾ-ಕಿವಿ ಆದಿಯಾಗಿ ಓಡಾಡಿದ ಜಾಗಗಳು, ಮತ್ತೆ, ಮತ್ತೆ, ನೆನಪಾಗುತ್ತಿದ್ದವು. ಅವರ ಮನೆಯ ಇಡೀ ಪರಿಸರ ನೋಡಲೇಬೇಕೆಂಬ ಉತ್ಕಟತೆ ಜಾಸ್ತಿಯಾಗಿ ನಿರುತ್ತರಕ್ಕೊಂದು ಪೋನು ಮಾಡಿ, ಪತ್ರವನ್ನೂ ಹಾಕಿ ಕಾಯುತ್ತಾ ಕೂತೆ.

ಪ್ರೊ. ಬಿ.ಎನ್.ಶ್ರೀರಾಮ್ ಅವರ ಕಡೆಯಿಂದ ಶಿಫಾರಸ್ಸು ಸಿಕ್ಕು, ಅಂತೂ ರಾಜೇಶ್ವರಿ ಮೇಡಂ ಅವರಿಂದ ಒಂದು ದಿನ ವೀಸಾ ಸಿಕ್ಕೇ ಬಿಟ್ಟಿತ್ತು. ನಾನು, ನನ್ನ ಹೆಂಡತಿ ಹಾಗು ನನ್ನಣ್ಣ ಮೂವರೂ ಮೂಡಿಗೆರೆಯ ಬಸ್ಸು ಹತ್ತಿದೆವು. ಮೂಡಿಗೆರೆಯಲ್ಲಿಳಿದು ಆಟೋ ಹಿಡಿದೆವು. ಮೂರು ಕಿಲೋ ಮೀಟರಷ್ಟು ಸಾಗಿ ಬಂದ ಆಟೋದವನು, ಅನಾಮಿಕವಾದ ಅರಣ್ಯದ ದಾರಿಯೊಂದರಲ್ಲಿ ಇಳಿಸಿ ಒಂದು ಮುಚ್ಚಿದ ಸಣ್ಣ ಗೇಟನ್ನ ತೋರಿಸಿ `ಇದೇ ಅವರ ಮನೆ ಇರಬೇಕು ನೋಡಿ ಎಂದು ಹೇಳಿ ಪುರ್ರಂತ ವಾಪಸ್ಸು ಹೋಗಿಯೇ ಬಿಟ್ಟ. ದಾರಿ ಕೇಳಲು ಅಲ್ಲಿ ಒಂದು ನರಪಿಳ್ಳೆಯ ಸುಳಿವೂ ಇರಲಿಲ್ಲ. ಬೋರ್ಡೋ ನೇತಾಕಿರಲಿಲ್ಲ. ಏನು ಮಾಡುವುದೆಂದು ತೋಚದೆ ಒಂದಿಷ್ಟು ಹೊತ್ತು ಅಲ್ಲೇ ಸುಮ್ಮನೆ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೆವು.

ಆ ದಾರಿಯಲ್ಲಿ ಯಾರಾದರೂ ಪಾದಚಾರಿಗಳು ಬರಹುದಾ! ಎಂದು ಕಾದೆವು. ಅಲ್ಲಿ ಯಾರ ಸುಳಿವೂ ಇರಲಿಲ್ಲ. ಇದೊಳ್ಳೆ ಚಿಂದಬರ ರಹಸ್ಯದಂತಾಯಿತಲ್ಲ!` ನೋಡೋಣ ನಡೀರಿ. ಈ ದಾರಿಯಲ್ಲಿ ಹೋದರೆ ಯಾವುದಾದ್ರು ಒಂದು ಮನೆ ಸಿಕ್ಕೇ ಸಿಗುತ್ತೆ. ತೇಜಸ್ವಿ ಮನೆ ಇದಲ್ಲ ಅಂದ್ರೆ ವಾಪಸ್ಸು ಬಂದರಾಯಿತೆಂದು, ಕಾಫಿ ತೋಟದ ಇಳಿಜಾರು ದಾರಿಯಲ್ಲಿ ಅನುಮಾನದಲ್ಲೇ ಇಳಿದೆವು. `ಇಂಥ ಎಸ್ಟೇಟ್ನಲ್ಲಿ ಕಳ್ಳರ ಹಾವಳಿ ಬಹಳಾಂತ ಈ ಓನರ್ಗಳು, ಸರಿಯಾದ ಐನಾತಿ ನಾಯಿಗಳನ್ನೇ ಸಾಕಿಕೊಂಡಿರ್ತಾರೆ. ನಮ್ಮ ಗ್ರಹಚಾರಕ್ಕೆ ಯಾವುದಾದ್ರು ಅಟ್ಟುಸ್ಕೊಂಡ್ ಬಂದ್ರೆ, ತಪ್ಪುಸ್ಕೊಂಡು ಓಡೋದಕ್ಕೆ ಹೆಂಗಾದರೂ ಆಗಲಿ ರೆಡಿಯಾಗೇ ಇರಿ ಅಂತ ನನ್ನ ಹೆಂಡತಿಗೂ, ಅಣ್ಣನಿಗೂ ಒಂದು ಎಚ್ಚರಿಕೆ ಕೊಟ್ಟೆ.

ಇಳುಕಲು ದಾರಿ ನಮ್ಮ ತಳ್ಳುತ್ತಿತ್ತು. ಅಂತೂ ಕಾಫಿ ತೋಟದ ದಾರಿ ಕಳೆದು ಒಂದು ಮನೆ ಕಂಡಿತು. ಅಲ್ಲೂ ವಿಳಾಸ ಬೋರ್ಡು ಹುಡುಕಿದೆವು. ಉತ್ತರವಿರಲಿಲ್ಲ. ಇದೇ ಮನೆ ಇರಬಹುದಾ ಎಂದು ಸಿಐಡಿ ಪತ್ತೆದಾರಿಗಳಂತೆ ಮನೆಯ ಹೊರಭಾಗವನ್ನೆಲ್ಲಾ ಇಣುಕಾಡಿದೆವು. ಅಲ್ಲೇ ಒಂದು ಕೊಟ್ಟಿಗೆ ಮನೆಯಂಥಹ ಕಡೆ ಹಳೆಯ ಹಸಿರು ಬಣ್ಣದ ಸ್ಕೂಟರ್ವೊಂದು ಕಣ್ಣಿಗೆ ಬಿದ್ದಿತು. ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ !? ಹೊಳೆದಂತಾಗಿ, ಅದಕ್ಕೆ ಹಿಂದಿನ ಸವಾರಿ ಕೂರುವ ಸೀಟೇನಾದರೂ ಇದೆಯಾ? ಎಂದು ಪರಿಶೀಲಿಸಿ ನೋಡಿದೆ. ಇರಲಿಲ್ಲ!!. ಓಹೋ! ಇದೇ ಹಡ್ರೆಂಡ್ ಪರ್ಸೆಂಟ್ ತೇಜಸ್ವಿ ಮನೆ. ಅನುಮಾನವೇ ಬೇಡ ಎಂದೆ. ಆಗಲೇ ಆ ಮನೆಯ ಒಳಗಿಂದ, ಜೋರಾಗಿ ನಗು- ನಗುತ್ತಾ ಬಂದ ಅತಿಥಿಗಳೊಂದಿಗೆ ಏನೋ ಮಾತಾಡುತ್ತಿದ್ದ, ರಾಜೇಶ್ವರಿಯವರ ಧ್ವನಿಯೂ ಕಿವಿಗೆ ಬಿತ್ತು. ನಮ್ಮ ಹುಡುಕಾಟದ ಉತ್ತರ – ನಿರುತ್ತರ ಅದೇ ಆಗಿತ್ತು. ಅವತ್ತಿನ ಆ ಒಂದು ಭಾನುವಾರ ನಿರುತ್ತರದ ಅನುಭವ ತುಂಬಾ ಎತ್ತರವಾದ್ದದ್ದು. ಯಾವತ್ತು ಮರೆಯಲಾಗದಂಥದ್ದು.

ರಾಜೇಶ್ವರಿಯವರು ತೇಜಸ್ವಿಯವರ ಸಿಟ್ಟು,ಸೆಡವುಗಳಿಗೆ ಪಕ್ಕಾ ತದ್ವಿರುದ್ಧಾವಾಗಿ ಕಂಡರು. ನಮ್ಮ ಖಾಸ ಅಕ್ಕನ ಮನೆಗೇ ಹೋದಷ್ಟು ಸಲಿಗೆ, ಆತ್ಮೀಯತೆಗಳಿಂದ ಮನ ಬಿಚ್ಚಿ ನಗುತ್ತಾ, ಮಾತಾಡಿಸಿದರು. ದಿನವಿಡೀ ದಣಿಯದೆ ನಮ್ಮ ಎಲ್ಲಾ ಅಸಂಬದ್ಧ ಪ್ರಶ್ನೆಗಳಿಗೂ ಉತ್ತರಿಸುತ್ತಾ ಹೋದರು. ತೇಜಸ್ವಿ ಎಂಬ ಹುಲಿ ಮನೆಯಲ್ಲಿ ಇಲ್ಲವಲ್ಲ ಎಂಬ ದೈರ್ಯವೂ, ಅಂತಹ ಮಹಾ ಬರಹಗಾರ ನಮ್ಮಿಂದ ದೂರವಾದರಲ್ಲ ಎಂಬ ಕೊರಗು ನಮ್ಮ ಕ್ಷಣ-ಕ್ಷಣವೂ ಕಾಡಿಸುತ್ತಲೇ ಇತ್ತು. ಸುತ್ತಲ ಕಾಡು,ಚಿಲಿಪಿಲಿಗುಟ್ಟುವ ಪಕ್ಷಿಗಳು, ಪಿಂಕ್ ಕಲರ್ರಿನ ಚಿಟ್ಟೆ, ತೇಜಸ್ವಿ ನೆಟ್ಟ ಕಿತ್ತಲೆ, ಅಂಗಳದ ಹೂವುಗಳು ಮಾತ್ರ ತೇಜಸ್ವಿ ನಮ್ಮೊಂದಿಗೆ ಹಾಯಾಗಿದ್ದಾರೆ ನೀವೇನೂ ಚಿಂತಿಸದಿರಿ ಎಂದು ಸಾಂತ್ವಾನ ಹೇಳುತ್ತಿದ್ದವು.

ತೇಜಸ್ವಿ ಇಡೀ ತಮ್ಮ ಮನೆಯನ್ನೇ ತಮ್ಮಪ್ರಯೋಗಶಾಲೆ ಮಾಡಿಕೊಂಡಿದ್ದರು. ತಾವು ಕೂತು ಬರೆಯುವ ರೂಮಿನ ಆ ಕಿಟಕಿಗೊಂದು ಕಪ್ಪು ಪರದೆ ಕಟ್ಟಿ, ಅವಕ್ಕೆ ಕಳ್ಳ ಕಿಂಡಿಗಳನ್ನು ಕೊರೆದುಕೊಂಡಿದ್ದರು. ಆ ಗೌಪ್ಯ ಕಿಂಡಿಗಳಾಚೆ ಒಂದು ಬಾಗಿದ ಕೋಲೊಂದನ್ನು ಕಟ್ಟಲಾಗಿತ್ತು. ಅದರ ಮೇಲೆ ಕಾಡಿನಿಂದ ಹಾರಿ ಬರುವ ಪಕ್ಷಿಗಳು ಮುಗ್ಧವಾಗಿ ಬಂದು ಕೂರುತ್ತಿದ್ದವು. ಅವುಗಳಿಗೆ ಕಿಟಕಿಯಾಚೆ ತಮ್ಮ ಭಾವ-ಭಂಗಿಗಳ ಸೆರೆ ಹಿಡಿಯಲು ಜಾದೂಗಾರ ಲೇಖಕನೊಬ್ಬ ಕಾಯುತ್ತಿದ್ದಾನೆಂಬ ಪರಿವೇ ಇರುತ್ತಿರಲಿಲ್ಲ. ಅದರ ಬದಿಯಲ್ಲೇ ಕಲ್ಲಿನ ಸಣ್ಣ ಬಾನಿಯೊಂದನ್ನಿಟ್ಟು ಅಲ್ಲಿ ಕಾಳುಗಳ ಚೆಲ್ಲುವ ಪರಿಪಾಟವಿತ್ತು. ಇದನ್ನೇ ತಮ್ಮ ತಂಗುದಾಣ ಮಾಡಿಕೊಂಡಿದ್ದ ಹಲವಾರು ಪಕ್ಷಿಗಳು ಇಲ್ಲಿ ತೇಜಸ್ವಿಯವರ ಮಾಯಾಡಬ್ಬಿಗೆ ಸೆರೆಯಾಗಿವೆ. ಹಾಗಾಘಿಯೇ ಅವರು ಹೇಳುತ್ತಿದ್ದದ್ದು `ಅವೇ ಫೋಟೋ ತೆಗೆಸಿಕೊಳ್ಳೋಕೆ ನನ್ನ ಹತ್ರ ಬತರ್ಾವೆ ಕಂಡ್ರಿ.ನಾನ್ಯಾಕೆ ಅಲೀಲಿ ಹೇಳಿ ಅಂತ.

ರಾಜೇಶ್ವರಿಯವರು ಮನೆ ಮುಂದಿನ ಒಂದು ಗಿಡದ ತುದಿಗೆ ಕಟ್ಟಿದ್ದ್ ಬುಲ್-ಬುಲ್ ಹಕ್ಕಿಯ ಗೂಡನ್ನು ತೋರಿಸಿ` ಓಹೋ, ಮರಿ ಮಾಡಿತ್ತು!. ಯಾವಾಗಲೋ ಬಾಣಂತನ ಮುಗಿಸಿಕೊಂಡು ಮಕ್ಕಳನ್ನು ಕರ್ಕೊಂಡು ಹೋಗಿದೆ. ತೇಜಸ್ವಿ ಇರ್ತಿದ್ದರೆ, ಅದರ ಪ್ಯಾಮಿಲಿ ಪೋಟೋ ತೆಗೀದೆ ಬಿಡ್ತಿರಲಿಲ್ಲ ಎಂದು ವಿಷಾದದಿಂದ ನಕ್ಕರು. ಕಣ್ಣ ತುದಿಯಲ್ಲಿ ನೀರ ಹನಿಗಳು ಸಣ್ಣಗೆ ಮೂಡಿದವು. ಅಷ್ಟರಲ್ಲಿ ಬಂದ ಡಾ.ಕೆ.ಸಿ. ಶಿವಾರೆಡ್ಡಿ ತೇಜಸ್ವಿ ನಡೆದಾಡಿದ ಆ ಮನೆಯ ಪ್ರತಿ ಭಾಗದ ವಿವರಗಳನ್ನೂ ನಮಗೆ ಪ್ರೀತಿಯಿಂದ ತಿಳಿಸಿಕೊಟ್ಟರು.

ತೇಜಸ್ವಿ ಸಾಹಿತ್ಯದ ಚೈತನ್ಯವೂ ಸ್ಪೂರ್ತಿಯೂ ಆಗಿದ್ದ, ಆ ಇಡೀ ತೋಟವನ್ನೊಮ್ಮೆ ಸುತ್ತಿ ನೋಡಿ ಬರೋಣವೆಂದು ಕ್ಯಾಮೆರಾ ಹೆಗಲಿಗೇರಿಸಿ, ಹೊರಟೆ. ತೇಜಸ್ವಿ ಇಲ್ಲೆಲ್ಲಾ ಓಡಾಡಿದ್ದಾರೆ. ಅವರ ಶ್ರಮ, ಕನಸುಗಳೆಲ್ಲಾ, ಇಲ್ಲಿ ಎಷ್ಟೊಂದು ಚೆನ್ನಾಗಿ ರೂಪುತಾಳಿವೆ ಎಂಬುದ ನೆನೆದು ಸಂತಸವಾಯಿತು. ಅಲ್ಲೇ ಕರೆಯ ಮೇಲೆ ಹಾರಾಡುತ್ತಿದ್ದ ಎರಡು ಬಗೆಯ ರಂಗುರಂಗಿನ ಚಿಟ್ಟೆಗಳು ಕಂಡವು.ಒಂದು ಕಪ್ಪು, ಮತ್ತೊಂದು ಕಡು ಪಿಂಕ್ ಬಣ್ಣದ ಏರೋಪ್ಲೇನ್ ಚಿಟ್ಟೆ. ಅವು ಆರಾಮಾಗಿ ಬಿಸಲ ಕಾಯುಸುತ್ತಿದ್ದವು. ಅವುಗಳ ಪೋಟೋಗಳೇನೋ, ತೆಗೆದೆ. ಅಷ್ಟರರಲ್ಲೇ, ಸರಕ್ಕನೆ ಸದ್ದಾಯಿತು!. ನಿಂತಿದ್ದ, ಕೆರೆಯ ಏರಿ ಕೆಳಗೆ ನೋಡಿದೆ!. ಪೊಗದಸ್ತಾಗಿದ್ದ ಕಪ್ಪು ನೀರು ಕೋಳಿಯದು. ಪುಡಿ ಮೀನುಗಳ ಶಿಕಾರಿ ಮಾಡುತ್ತಿದ್ದ, ಅದಕ್ಕೆ ನನ್ನ ಇರುವಿಕೆ ಬಹಳ ತಡವಾಗಿ ತಿಳಿಯಿತು ಅಂತ ಕಾಣ್ಸುತ್ತೆ. ಅದರ ಏಕಾಗ್ರತೆಗೆ ಭಂಗ ಬಂದಿತ್ತು. ಅದರ ಊಟದ ಟೈಮದು. ಹೀಗಾಗಿ, ಅದು ತೀರಾ ಗೊಣಗಾಡಿಕೊಂಡೇ ಕೊರಕೊರ ಎನ್ನುತ್ತಾ ಅಲ್ಲಿಂದ ಹಾರಿಹೋಯಿತು. ತೇಜಸ್ವಿ ಇರುತ್ತಿದ್ದರೆ ನನ್ನ ಬಗ್ಗೆ ಅವರಿಗೆ ಚಾಡಿ ಹೇಳುತ್ತಿತ್ತೋ ಏನೋ?

ಅಲ್ಲಿಂದ ಸ್ವಲ್ಪ ದೂರದಲ್ಲೇ, ತೇಜಸ್ವಿ ಈ ನೀರು ಹಕ್ಕಿಗಳ ಪೋಟೋ ತೆಗೆಯಲೆಂದೇ ಕಟ್ಟಿಕೊಂಡ ನಾಲ್ಕು ಮೂಲೆಯ ಟಾರ್ಪಾಲಿನ ಆಸರೆಯೊಂದು ಇತ್ತು. ಅದಕ್ಕೂ ಕ್ಯಾಮೆರಾ ಕಣ್ಣಿನ ಕಳ್ಳ ದಾರಿಗಳಿದ್ದವು.ಅವುಗಳನ್ನು ಚಾಕಿನಿಂದ ಸೀಳಲಾಗಿತ್ತು. ಮುಂದುವರೆದಂತೆ ಮನೆಯ ಸುತ್ತಲೂ, ತೇಜಸ್ವಿ ನಟ್ಟು ಬೆಳೆಸಿದ ಬಗೆ ಬಗೆಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಕೆಂಪು ಕಾಫಿಹಣ್ಣಿನ ಗಿಡಗಳು ಚೆಲುವಿನಿಂದ ನಳನಳಿಸುತ್ತಿದ್ದವು. ಅಲ್ಲಿನ ಪರಿಸರಕ್ಕಿಂತಲೂ, ನಮ್ರವಾಗಿದ್ದದ್ದು ರಾಜೇಶ್ವರಿ ಅವರ ಮಾತು ಹಾಗೂ ಪ್ರೀತಿಯ ಆತಿಥ್ಯ. ನಮ್ಮಂತೆಯೇ, ಲಂಗು ಲಗಾಮಿಲ್ಲದೆ ತೇಜಸ್ವಿ ಅಭಿಮಾನದಲ್ಲಿ ಓಡೋಡಿ ಬರುವ ವಿಚಿತ್ರ ಪಾತ್ರಗಳನ್ನು ನೋಡಿ ಅವರೂ ಈಗಾಗಲೇ ಸುಸ್ತಾಗಿ ಹೋಗಿದ್ದಾರೆ.

ಸಂಜೆಯ ಸೂರ್ಯ ಟಾಟಾ ಹೇಳುವ ಹೊತ್ತಾಗಿತ್ತು. ಮನೆಯ ಹಿತ್ತಲಿನಿಂದ ಮನುಷ್ಯರ ಕತ್ತರಿಸಿದ ತಲೆಗಳಂತಿದ್ದ ಭಾರಿ ಗಾತ್ರದ ಚಕ್ಕೊತಾ ಹಣ್ಣುಗಳನ್ನು ರಾಜೇಶ್ವರಿಯವರು ನಮಗಾಗಿ ಹೊತ್ತು ತಂದರು. ನಮಗ್ಯಾರಿಗೂ ಆ ಮನೆ, ಅಲ್ಲಿನ ವಾತಾವರಣ,ತೇಜಸ್ವಿಯವರ ಮಧುರ ನೆನಪುಗಳು, ರಾಜೇಶ್ವರಿಯವರ ಆತ್ಮೀಯತೆ, ಆ ಕಾನನ ಬಿಟ್ಟು ಬರುವುದೇ ಇಷ್ಟವಿರಲಿಲ್ಲ. ಆದರೂ ಭಾರವಾದ ಹೆಜ್ಜೆ ಇಡುತ್ತಾ ಏರು ದಾರಿ ಕಡೆ ತೇಜಸ್ವಿಯವರ ಕಥಾ ಪಾತ್ರಗಳ ಮತ್ತೊಮ್ಮೆ ಮೆಲಕು ಹಾಕುತ್ತಾ ಸಾಗಿ ಬಂದೆವು. ”ನಿರುತ್ತರ” ತೇಜಸ್ವಿಯವರ ಗಡ್ಡದಂತಿದ್ದ ಆ ಕಣಿವೆ ಕಾಡಿನ ನಡುವೆ ಮೌನವಾಗಿ ನಗುತ್ತಾ ನಿಂತಿತ್ತು.

Image credits: The copyright for the images used in this article belong to their respective owners. Best known credits are given under the image. For changing the image credit or to get the image removed from Caleidoscope, please contact us.

9 COMMENTS

  1. ಚಿತ್ರ -ಲೇಖನ ತುಂಬಾ ಚನ್ನಾಗಿದೆ… ಲೇಖನ ಓದಿ ತುಂಬಾ ಖುಷಿ ಆಯಿತು… Its really superb…

  2. ಈ ಲೇಖನ ಓದಿ ಚನ್ನಾಗಿದೆ ಎಂದು ಹೇಳಿದ ನನಗೆ ಮತ್ತೆ ಇದನ್ನು ಓದಬೇಕು ಎನಿಸಿತು. ಹಾಗಾಗಿ ಮತ್ತೆ ಓದಿದೆ. ಕಲೀಂ ಅವರು ತೇಜಸ್ವಿ ಅವರ "ನಿರುತ್ತರ"ಕ್ಕೆ ಹೋಗಿ ಸಂಜೆವರೆಗೆ ಇದ್ದು ಬಂದ ಒಂದೇ ಒಂದು ಸಂಗತಿಯನ್ನು ಓದುಗರಿಗೆ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದಾರೆ. ತೇಜಸ್ವಿ ಅವರ ಮನೆಗೆ ಹೋಗಿರದ, ಅವರ ಪುಸ್ತಕಗಳನ್ನೇ ಓದಿ ಅವರ ಬಗ್ಗೆ ಕಲ್ಪನೆಗಳಲ್ಲಿಯೇ ಕಾಲ ದೂಡುವ ನನ್ನಂತವರಿಗೆ ಅದು ತೀರ ಆಪ್ತ. ನಿಜಕ್ಕೂ ಇದನ್ನು ಓದಿದ ನನಗೆ ನಾನೇ ಅಲ್ಲಿಗೆ ಹೋಗಿ ಬಂದ ಅನುಭವ ಆಯಿತು. ಆ ಕಾರಣಕ್ಕಾಗಿಯೇ ನಾನು ಮತ್ತೆ ಓದಿದ್ದು. ಇಂಥ ಒಂದು ಸುಂದರ ಕಥಾನಕವನ್ನು ನೀಡಿದ ಕಲೀಮ್ ಅವರಿಗೆ ಧನ್ಯವಾದಗಳು.

  3. ಕಲೀಮ್, ಹೇಗಿದ್ದೀರಿ?
    ಅದ್ಭತ pHoto ನೋಡಿ ಹೊಟ್ಟೆಕಿಚ್ಚು ಬಂತು. ಮೊದಲು ನೋಟಕ್ಕೇ ಆಕರ್ಷಕವಾಗಿದೆ. `ನಿರುತ್ತರ' ಸಂಪರ್ಕ ಇರುವ ನೀನು ಅದೃಷ್ಟವಂತ! ನಿಜ ಹೇಳಬೇಕೆಂದರೆ ನಾನು ಆ ನಿರುತ್ತರ ನೋಡಲೇ ಇಲ್ಲ. ವಿವರವಾಗಿ ಮತ್ತೆ ಬರೆಯುವೆ. ನಿನ್ನ ವಿಳಾಸ mail ಮಾಡು. ಇಲ್ಲ 9900566020 ಪೋನಾಯಿಸು. ಬಹುದಿನಗಳ ನಂತರ `ಅನ್ವೇಷಣೆ' ವಿಶೇಷಾಂಕ ಬಂದಿದೆ. ಕಳುಹಿಸಬೇಕು. -ಆರ್.ಜಿ. ಹಳ್ಳಿ.

  4. ಸರ್ ನಾವು ಶಿವಮೊಗ್ಗದ ವಿದ್ಯಾರ್ಥಿಗಳು. ತೇಜಸ್ವಿಯವರ ಮನೆಗೆ ನಾವು ಹೋಗಬಹುದೇ?

LEAVE A REPLY

Please enter your comment!
Please enter your name here

INSPIRING READS

TRENDING TOPICS

Featuring Indian Artists
Explore Indian Art Galleries
Explore Indian Folk Art Forms
Explore Indian Folk Dance Forms
Explore Indian Crafts
Explore Indian Fabric Art Forms