ಮೈಮೇಲಿನ ಹೆಣ ಭಾರದ ಬ್ಯಾಗುಗಳನ್ನು ಲಗುಬಗೆಯಿಂದ ರೂಮಿನಲ್ಲಿ ಎತ್ತು ಬಿಸಾಡಿದ ಗೆಳೆಯರೆಲ್ಲಾ ಮೊದಲು ಶಾಪಿಂಗ್ಗೆ ಪಲ್ಟನ್ ಬಜಾರ್ಗೆ ಹೋಗೋಣ ನಡಿಯಪ್ಪ, ಖರೀದಿ ಮಾಡೋದು ಸಾವ್ರ ಇದೆ ಎಂದು ಅವಸರ ಮಾಡುತ್ತಾ ನನ್ನ ಹೊರಡಿಸಿದರು.
ಡೆಹರಾಡೂನಿನ ಪಲ್ಟನ್ ಬಜಾರ್ ಮೈ ತುಂಬಾ ಅಂಗಡಿ ಮುಂಗಟ್ಟುಗಳನ್ನು ತುಂಬಿಕೊಂಡ ಮಾಕರ್ೆಟ್ ಪ್ರದೇಶ. ಸುಮಾರು ಎರಡು ಕಿಲೋ ಮೀಟರ್ ಉದ್ದಕ್ಕೆ ನಾಲಿಗೆ ಚಾಚಿರುವ ಇಲ್ಲಿ ಮಧ್ಯಮ ವರ್ಗದವರ ಅಚ್ಚು ಮೆಚ್ಚಿನ ಸಾಕಷ್ಟು ವಸ್ತುಗಳು ಅಂದುಕೊಂಡಿದ್ದಕ್ಕಿಂತ ಒಂದಿಷ್ಟು ಕಡಿಮೆ ಬೆಲೆಗೆ ಸಿಕ್ಕು ಆಸೆ ಆಶ್ಚರ್ಯ ಹುಟ್ಟಿಸುತ್ತವೆ. ಅದರಲ್ಲೂ ಇಂಡಿಯನ್ ಆಮರ್ಿಯ ಸೈನಿಕರು-ಆಧಿಕಾರಿಗಳು ಬಳಸುವ ಎಲ್ಲಾ ನಮೂನೆಯ ಬಟ್ಟೆ-ಶೂ-ಬ್ಯಾಗು-ಸ್ವೆಟರುಗಳಂತೂ ಚೌಕಾಶಿ ಮಾಡಿದಷ್ಟು ಕಡಿಮೆ ಬೆಲೆಗೆ ಇಳಿದು ಕೊಳ್ಳುಬಾಕತನವ ಹೆಚ್ಚಿಸುತ್ತವೆ. ಇಂಥ ಬಜಾರಿನ ಮಾಹಿತಿಯನ್ನು ಡೆಹರಾಡೂನಿಗೆ ಬರುವ ಮೊದಲೇ ಎಲ್ಲೆಲ್ಲಿಂದಲೋ ಸಂಗ್ರಹಿಸಿದ್ದ ನಾವು ಆ ದಿನ ಸಾಕ್ಷಾತ್ ದರೋಡೆಕೋರರಂತೆ ರಸ್ತೆಗಿಳಿದು ಎಲ್ಲಾ ಅಂಗಡಿಗಳನ್ನು ದುರುಗುಟ್ಟುತ್ತಾ ಸಾಗುತ್ತಿದ್ದೆವು.
ಅಷ್ಟರಲ್ಲಿ ನನ್ನ ನಜರು ಬಣ್ಣ-ಬಣ್ಣದ ಸರಗಳನ್ನು ನೇತಾಕಿದ್ದ ಅಂಗಡಿಯೊಂದರ ಮೇಲೆ ಅಚಾನಕ್ ಆಗಿ ಬಿದ್ದಿತ್ತು. ಚಿತ್ತಾರದ ಕಲಾಕೃತಿಗಳನ್ನ ಚೆಂದದ ಬಣ್ಣದ ಕಾಗದದಲ್ಲಿ ಮೂಡಿಸಿ ಹೆಣೆಯಲಾಗಿದ್ದ ಅವುಗಳಲ್ಲಿ ಏನೋ ಒಂದು ಪರಮಾಶ್ಚರ್ಯ ನನ್ನ ಕಣ್ಣಿಗೆ ಎದ್ದು ಕಾಣುತ್ತಿತ್ತು. ಹಾಗಿದ್ದರೆ ಇದನ್ನು ಯಾವ ವಸ್ತುವಿನಿಂದ ಮಾಡಿರಬಹುದು!? ನೋಡೋಣ ಎಂದು ಕುತೂಹಲದಿಂದ ಮತ್ತೊಂದಿಷ್ಟು ಹತ್ತಿರಕ್ಕೆ ಹೋಗಿ ನಿಂತೆ. ನಿಜವಾಗಿಯೂ ವಿಸ್ಮಯ ಎನಿಸಿತು. ಅದು ನಮಗೆಲ್ಲಾ ತುಂಬಾ ಪರಿಚಿತವಾದ ವಸ್ತುವೊಂದರಿಂದ ಮಾಡಲ್ಪಟ್ಟಿತ್ತು.!
ಅಂಗಡಿ ಮುಂದೆ ಮಾರಾಟಕ್ಕೆ ಸಜ್ಜಾದ ನೋಟಿನ ಹಾರಗಳು.
ನಿಜಕ್ಕೂ ನನ್ನ ಕಣ್ಣುಗಳನ್ನೇ ನಂಬಲಾಗದ ನಾನು ಒಮ್ಮೆಗೇ ಎಲ್ಲರಿಗೂ ಕೂಗಿಕೊಂಡೆ. `ಏಯ್ ಎಲ್ಲಾ ಬೇಗ ಬನ್ನಿ ಇಲ್ಲಿ. ಈ ವಿಚಿತ್ರದ ಹಾರ ಸ್ವಲ್ಪ ನೋಡಿ. ಇದು ಯಾವುದರಿಂದ ಮಾಡಿದ್ದಾರೆ ಅನ್ನೋದನ್ನ ಗಮನವಿಟ್ಟು ನೋಡಿ ಎಂದೆ. ನನ್ನ ಸದ್ದಿಗೆ ಓಗೊಟ್ಟು ಬಂದವರೆಲ್ಲರೂ ಅಲ್ಲಿ ನಿಂತು ನೇತಾಕಿದ್ದ ಹಾರಗಳನ್ನು ಕಂಡು ನನ್ನಂತೆಯೇ ಹೌಹಾರಿ ನಿಂತರು. ನನ್ನ ಪರಿಶೀಲನೆ, ಹಾಗು ಕೂಗಾಟವನ್ನು ಹಾಗೇ ಗಮನಿಸುತ್ತಿದ್ದ, ಅಂಗಡಿ ಮಾಲೀಕನೂ ಏನಾಯಿತೆಂದು ಹೊರಗೆ ಬಂದು ನಿಂತ. ನಮ್ಮ ಆಶ್ಚರ್ಯದ ನಡವಳಿಕೆಯಿಂದ ಅವನೇನೂ ವಿಚಲಿತನಾಗಿರಲಿಲ್ಲ. ವ್ಯಂಗದ ಸಣ್ಣ ನಗು ಚೆಲ್ಲುತ್ತಾ ಟೂರಿಸ್ಟ್ ಎಂದು ಗೊಣಗುತ್ತಾ ನಿಂತುಕೊಂಡ.
ತೂಗು ಹಾಕಿದ್ದ ಹಾರಗಳನ್ನು ನೋಡಿದ ಎಲ್ಲರೂ ಒಮ್ಮೆಗೇ ಕಕ್ಕಾಬಿಕ್ಕಿಯಾದೆವು. ಏಕೆಂದರೆ ಆ ಹಾರಗಳನ್ನು ಯಾವುದೋ ಮಾಮೂಲಿ ಬಣ್ಣದ ಪೇಪರ್ಗಳಿಂದ ಮಾಡಿರಲಿಲ್ಲ. ಬದಲಿಯಾಗಿ ರಿಸವರ್್ ಬ್ಯಾಂಕ್ ಆಫ್ ಇಂಡಿಯಾದ ಹೊಚ್ಚ-ಹೊಸ ಗರಿಗರಿಯಾದ ನೋಟುಗಳಿಂದ ತಯಾರಿಸಿದ್ದರು. ನೂರು ರೂಪಾಯಿಯ ನೋಟಿನ ಹಾರದಿಂದ ಹಿಡಿದು ಎರಡು ರೂಪಾಯಿಯ ನೋಟಿನ ತನಕದ ಹಾರಗಳ ರಾಶಿಯೇ ಅಲ್ಲಿ ತುಂಬಿ ಹೋಗಿದ್ದವು.
ನೋಟಿಗಾಗಿ ವ್ಯಾಪಾರ ಮಾಡುವ ಜನರನ್ನ ನಾವು ದಿನಾ ನೋಡುತ್ತೇವೆ. ಆದರೆ ನೋಟನ್ನೇ ಮಾರಿ ನೋಟು ಸಂಪಾದಿಸುವ ಈ ಜನರ ವರ್ತನೆಯೇ ನನಗೆ ವಿಚಿತ್ರವೆನಿಸಿತು. ಜನರ ದಿನ ನಿತ್ಯದ ವ್ಯವಹಾರಿಕ ಬಳಕೆಗೆಂದು ಸಕರ್ಾರ ಹೊಚ್ಚ ಹೊಸ ನೋಟುಗಳನ್ನ ಪ್ರಿಂಟು ಹಾಕಿಸುತ್ತದೆ. ಆಥರ್ಿಕ ವಹಿವಾಟಿಗಲ್ಲದೆ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಇವುಗಳನ್ನು ಬಳಸುವುದು ನಿಷಿದ್ದ. ಹೀಗಿರುವ ಇವುಗಳನ್ನು ಇವರು ಹ್ಯಾಗೆಂದರೆ ಹಾಗೆ ಮಡಿಸಿ ಬೇಕಾಬಿಟ್ಟಿಯಾಗಿ ಸ್ಟೆಪ್ಲರ್ ಪಿನ್ನು ಹೊಡೆದು ರೂಪಿಸಿದ್ದ ಹೂವಿನ-ನವಿಲಿನ ಆಕೃತಿಗಳನ್ನು ರಚಿಸಿರುವ ಇವರ ಇಡೀ ಕಲಾವಂತಿಕೆ ಬಗ್ಗೆಯೇ ನನಗೆ ಸಿಟ್ಟು ಬಂದಿತು.
ಇಂಥ ಹಾರಗಳನ್ನ ಯಾರಿಗಾಗಿ ಮಾಡಿಟ್ಟಿದ್ದೀರಿ.ಇವುಗಳನ್ನು ಯಾರು ಕೊಳ್ಳುತ್ತಾರೆಂದು ಅಂಗಡಿಯವನಿಗೆ ಕೇಳಿದೆ.ಅದಕ್ಕವನು ಅದೆಲ್ಲಾ ಇಲ್ಲಿನ ರಿವಾಜು. ಮದುವೆ ಸಮಯದಲ್ಲಿ ಗಂಡಿಗೆ ಈ ದುಡ್ಡಿನಿಂದ ನೇಯ್ದ ಹಾರವನ್ನ ಹಾಕ್ತಾರೆ. ಅವರವರ ಸ್ಥಿತಿಗೆ ತಕ್ಕಂತೆ ಬೇರೆ ಬೇರೆ ರೈಟಿನ ಹಾರಗಳನ್ನ ಖರೀದಿಸುತ್ತಾರೆ. ಬಡವರು ಎರಡು ರೂಪಾಯಿ ಪೋಣಿಸದ ಹಾರಗಳಿಂದ ಹಿಡಿದು ಹೆಚ್ಚ್ಚೆಂದರೆ ಹತ್ತು ರೂಪಾಯಿ ತನಕ ಮಾಡಿದ ಹಾರ ಖರೀದಿಸುತ್ತಾರೆ. ಐನೂರು-ಸಾವಿರ ರೂಪಾಯಿಗಳಿಂದ ಮಾಡುವ ಹಾರಗಳನ್ನ ಶ್ರೀಮಂತರು ಮೊದಲೇ ಆರ್ಡರ್ ಕೊಟ್ಟು ಮಾಡಿಸುತ್ತಾರ ಎಂದ.
ಆಗ ನಮ್ಮ ಕವಿ ಮಿತ್ರ ವಿಕ್ರಮ್ವಿಸಾಜಿ `ಸಾರ ನಮ್ಮ ಕಡಿ ಸತ್ತವಂಗೆ ಮಾತ್ರ ಈ ನಮೂನಿ ಹಾರ ಮಾಡಿ ಹಾಕ್ತಾರೆ. ಎಂದರು. ಆ ಮಾತಿಗೆ ನಾವೆಲ್ಲ ಮುಸುಮುಸಿ ನಕ್ಕೆವು. ಕನ್ನಡ ಅರ್ಥವಾಗದ ಅಂಗಡಿಯವನು ಇವರೆಲ್ಲಾ ನನ್ನನು ಕಿಚಾಯಿಸುತ್ತಿದ್ದಾರೆಂದೇ ಭಾವಿಸಿ ಅಂಗಡಿಯೊಳಗೆ ನುಸುಳಿಕೊಂಡ. ಮತ್ತೆ ಕತ್ತೆತ್ತಿ ಬಜಾರಿನ ಬೀದಿ ಕಡೆ ನೋಡಿದರೆ ನೋಟಿನ ಸರಗಳನ್ನೇ ಸಾಲಾಗಿ ತಮ್ಮ ಮುಖಗಳ ಮೇಲೆ ಹೇರಿಕೆೊಂಡ ಅಂಗಡಿಗಳ ಮಹಾಮೇಳವೇ ಅಲ್ಲಿ ಎದ್ದು ಕಾಣುತ್ತಿತ್ತು.
ಬ್ಯಾಂಕಿನಿಂದ ಆಗಷ್ಟೇ ಬಿಡುಗಡೆಯಾಗುವ ಗರಿಗರಿ ನೋಟುಗಳನ್ನೇ ಹುಡುಕಿ ತಂದು ಕ್ರಮಸಂಖ್ಯೆಗಳಿಗೆ ಅನುಗುಣವಾಗಿ ಇವರು ಹಾರ ತಯಾರಿಸುತ್ತಾರೆ. ದುಡ್ಡು ಕೊಟ್ಟು ದುಡ್ಡನ್ನೇ ಖರೀದಿ ಮಾಡುವ ಇಲ್ಲಿನ ಈ ವಿಚಿತ್ರ ವ್ಯಾಪಾರ ನಮಗಂತೂ ಆಶ್ಚರ್ಯವೇ ಅನ್ನಿಸಿತು.
ಕಲೀಮ್ ಉಲ್ಲಾ.