ನಾನೀಗ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೇನೆ. ನಾನು ಮೇಷ್ರೇ ಆಗಬೇಕೆಂದು ಬಯಸಿದವನು. ಬಾಲ್ಯದಲ್ಲಿ ಸಿಕ್ಕಾಪಟ್ಟೆ ಕನ್ನಡ ಸಿನಿಮಾಗಳ ನೋಡಿ ಪೋಲೀಸ್ ಇನ್ಸ್ಪೆಕ್ಟ್ಸರ್ ಆಗಬೇಕೆಂದುಕೊಂಡೆ. ಸಧ್ಯ ಅದೃಷ್ಟ ಚೆನ್ನಾಗಿತ್ತು ಆಗಲಿಲ್ಲ. ನನಗೆ ನನ್ನ ವಿದ್ಯಾರ್ತಿಗಳು ನನಗಿಂತ ದೊಡ್ಡವರಾಗಿ ಬಾಳಿ ಬದುಕುವುದು ನೋಡಿ ಸಂತೋಷವಾಗುತ್ತೆ. ಅದೇ ನನಗೆ ಹೆಚ್ಚು ತೃಪ್ತಿ ಕೊಟ್ಟಿದೆ. ತೇಜಸ್ವಿಯವರ ಕಥೆಗಳ ಓದಿ ಕ್ಯಾಮೆರಾ ಹುಚ್ಚು ಹತ್ತಿಸಿಕೊಂಡು ಬಹಳ ದುಡ್ಡು ಕಳೆದುಕೊಂಡು ಒಂದಿಷ್ಟು ಕಲಿತಾಗಿದೆ. ಅದರ ಜೊತೆ ನಾಟಕದ ಹುಚ್ಚು ಬೇರೆ. ಇವೆಲ್ಲಾ ಹಣ ಕಳೆದುಕೊಂಡು ಜೀವನದಲ್ಲಿ ಪಡೆಯುವ ವಿಶಿಷ್ಟ ಅನುಭವಗಳು. ಗೆಳೆಯರ ಜೊತೆ ಕಾಡು ಮೇಡು ಅಲೆಯುವುದ, ರುಚಿಯಾದ ಊಟ ಸಿಗುವ ಮನೆ,ಹೋಟೆಲ್ಲುಗಳ ವಿವರ ಸಂಗ್ರಹಿಸುವುದು, ಗೆಳೆಯರ ಕಾಡಿಸಿ-ನಗಿಸಿ ಅವರ ಜೊತೆ ಕಾಲಕಳೆಯುವುದು ನನಗಿಷ್ಟ.
ಗೆಳೆಯ ನೂರ್ ಸಿಕ್ಕರೆ ಮಾತ್ರ ಕೆಲವೊಂದು ವಿಶೇಷ ಚಟಗಳು ನನ್ನ ಮುತ್ತಿಕೊಳ್ಳುವುದುಂಟು. ಅದರಲ್ಲಿ ಶಾಪಿಂಗ್ ಒಂದು. ಕೊಳ್ಳುವುದು ಕಡಿಮೆಯಾದರೂ ಬೆಂಗಳೂರಿನ ಗಲ್ಲಿಗಲ್ಲಿ ಸುತ್ತುವುದು ತುಂಬಾ ಜಾಸ್ತಿ. ಅವನ ಜೊತೆ ಹೀಗೆ ಅಂಡಲೆಯುವುದು ನನಗೆ ಪರಮಾನಂದ. ಒಂದಿಷ್ಟು ಓದುತ್ತೇನೆ. ಬರೆಯುತ್ತೇನೆ. ನಿದ್ದೆ ಮಾಡುವುದು ಎಂದರೆ ನನಗೆ ಪಂಚಪ್ರಾಣ. ಹಕ್ಕಿಗಳ ಒಳ್ಳೆ ಫೋಟೋ ತೆಗೆಯಬೇಕು ಎಂಬ ಆಸೆ ಬಹಳ ಇದೆ. ಇದಕ್ಕೆ ಬೇಕಾದ ಭಾರಿ ಕ್ಯಾಮೆರಾ ಕೊಳ್ಳುವ ಶಕ್ತಿ ಇನ್ನೂ ಬಂದಿಲ್ಲ. ಇರೋ ಲಾಟ್-ಪೂಟ್ ಕ್ಯಾಮೆರಾದಲ್ಲೆ ಏನೇನೋ ತೆಗೀತೀನಿ. ನಾನು ಪೋಟ್ರೈಟ್ ಚಿತ್ರಗಳನ್ನು ಚೆನ್ನಾಗಿ ತೆಗೆಯುತ್ತೇನೆ ಅಂತ ನನ್ನ ಅಣ್ಣ ಮತ್ತು ನಮ್ಮ ನಾಗರಾಜ ಹೇಳುತ್ತಾರೆ. ಅದನ್ನು ನಾನು ನಿಜ ಅಂತ ನಂಬಿದ್ದೀನಿ. ಇನ್ನು ಒಂದಿಷ್ಟು ಒಳ್ಳೆಯ ಗೆಳೆಯರನ್ನೂ, ಉತ್ತಮ ಶಿಷ್ಯರನ್ನು, ಪ್ರೀತಿಯ ಪುಸ್ತಕಗಳನ್ನು, ನೋಡದ ನಾಡನ್ನು ಕಣ್ಣಲ್ಲಿ ಮನಸ್ಸಲ್ಲಿ ತುಂಬಿಕೊಳ್ಳಬೇಕು ಅನ್ನುವ ಆಸೆ ಇದೆ. ಎಲ್ಲರಿಂದ ಏನೇನೋ ಕಲಿಯೋದು ಇದ್ದೇ ಇರುತ್ತೆ. ನಾನೂ ಇನ್ನೂ ಕಲೀಬೇಕಿದೆ.
ನನಗಿಂತ ಹೆಚ್ಚು ಕಂಪ್ಯೂಟರ್ ಹಾಗು ಇಂಟರ್ನೆಟ್ನಲ್ಲಿ ಪಳಗಿರುವ ಮತ್ತು ಒಳ್ಳೆ ಅಭಿರುಚಿಯನ್ನು ಛಾಯಾಚಿತ್ರದಲ್ಲಿ ಮತ್ತು ಬರವಣಿಗೆಯಲ್ಲಿ ಇಟ್ಟುಕೊಂಡಿರುವ ಶಿಷ್ಯ ನಾಗ್ಸ್ ಹಾಗೂ ತುಂಬಾ ಬುದ್ಧಿವಂತ ಮಿತ್ರ ಲಿವಿನ್ ಲಾರೆನ್ಸ್ ಅವರು ಎಂಥದ್ದೋ ಕಲೈಡೋಸ್ಕೋಪ್ ಅನ್ನೋ ಒಂದು ಅಂತರ್ತಾಣ ಮಾಡಿದ್ದಾರೆ. ಸದೈ ಅವರು ಹೇಳುವುದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ಕಂಪ್ಯೂಟರ್ ಜ್ಞಾನ-ಶಿಸ್ತು-ತಿಳಿವಳಿಕೆ ನನಗಿಲ್ಲ. ಅವರ ನಿಸ್ವಾರ್ಥ ಮತ್ತು ಕಳಕಳಿಯ ಈ ಪ್ರಯತ್ನಕ್ಕೆ ಶುಭವಾಗಲಿ ಅಂತ ಹಾರೈಸುತ್ತೇನೆ. ಅವರಿಂದ ಪರಿಸರ ಪ್ರೇಮ ಜನರಲ್ಲಿ ಹಾಗೂ ಜಡ ವ್ಯಕ್ತಿಗಳಲ್ಲಿ ಇನ್ನಾದರೂ ಅಧಿಕವಾಗಲಿ ಎಂಬುದು ನನ್ನ ಆಶಯ.