ಮುಂಬಯಿಯ ಲೋಕಲ್ ರೈಲೊಂದರಲ್ಲಿ ಪ್ರಯಾಣಿಸುತ್ತಾ ಮಾಟುಂಗ ನಿಲ್ದಾಣಕ್ಕಾಗಿ ಕಾಯುತ್ತಾ ನಿಂತಿದ್ದ ನನಗೆ, ಅಣ್ಣ ಕಲೀಮ್ ಹೇಳಿದ ಮಾತುಗಳು ಚಿಂತೆಗೀಡು ಮಾಡಿದ್ದವು. ಮುಂಬಯಿಯ ರೈಲುಗಳು ನಿಲ್ದಾಣಗಳಲ್ಲಿ 30 ಸೆಕೆಂಡ್‌ಗಳು ಮಾತ್ರ ನಿಲ್ಲುತ್ತವೆ. ಈ ಮೂವತ್ತು ಸೆಕೆಂಡ್‌ಗಳ ಅಂದಾಜು ಒಂದು ಟೀವೀ ಜಾಹೀರಾತಿನ ಸಮಯದಲ್ಲಿ ಇಳಿಯುವವರು ಉದುರಿಕೊಂಡು ಹತ್ತುವವರು ಸ್ಥಳ ಸಿಕ್ಕಲ್ಲಿ ನೇತು ಹಾಕಿಕೊಳ್ಳುತ್ತಾರೆ ಎಂದು ಅಚ್ಚರಿಯಿಂದ ನುಡಿದಿದ್ದರು. ಮೈಸೂರಿಗಳ ಮೂಲಭೂತ ಗುಣಗಳಲ್ಲೊಂದಾದ ಆರಾಮತನವನ್ನು ಸ್ವಲ್ಪ ಜಾಸ್ತಿಯೇ ಮೈಗೂಡಿಸಿಕೊಂಡಿದ್ದ ನನಗೆ ಈ ರೀತಿಯ ಅವಸರದ ಕೆಲಸಗಳು ಭಯ ಮೂಡಿಸುತ್ತವೆಯಾದರೂ ಬೇರೆ ವಿಧಿಯಿರಲಿಲ್ಲ…
ರೈಲು ನಿಂತ ಕ್ಷಣ, ಒಳಗೆ ನುಗ್ಗುತಿದ್ದ ಯಾತ್ರಿಕ ಸ್ಪರ್ಧಾಳುಗಳನ್ನು ಭೇದಿಸಿ ಮುನ್ನುಗ್ಗುತ್ತಾ ಹೊರಬಿದ್ದೆ. ಎರಡು ಕ್ಷಣಗಳ ಹಿಂದೆ, ಹೇಗೆ ಇಳಿಯುವುದು ಎಂಬ ಭೀತಿಯಲ್ಲಿದ್ದ ನನಗೆ ಒಂದು ಸಮರವನ್ನು ಗೆದ್ದು ಬಂದ ವೀರನಂತೆ ಭಾಸವಾಯಿತು. ನನ್ನ ವೀರವೇಶವನ್ನು ನಾನೇ ಪ್ರಸಂಶಿಸುತ್ತಾ ಮುನ್ನೆಡೆಯುತ್ತಿದ್ದಂತೆ ನನ್ನ ಹೆಗಲಿನಿಂದ ಸೊಂಟಕ್ಕೆ ಬಿಗಿದುಕೊಂಡಿದ್ದ ಕ್ಯಾಮರಾ ಬ್ಯಾಗ್ನಲ್ಲಿ ಏನೋ ಬದಲಾವಣೆ ಆದಂತೆ ಭಾಸವಾಯಿತು. ವೀರವೇಶವೆಲ್ಲ ಮಾಯವಾಗಿ ಅಂಡು ಸುಟ್ಟ ಬೆಕ್ಕಿನಂತೆ ಕ್ಯಾಮರಾ ಬ್ಯಾಗನ್ನು ಬಗ್ಗಿ ನೋಡಿದೆ. ಬ್ಯಾಗಿನ ಜಿಪ್ಪು ತೆರೆದುಕೊಂಡು ಕ್ಯಾಮರಾ, ಗಡಿಯಾರಗಳ ಪೆಂಡಲಂನಂತೆ ಜೋತಾಡುತ್ತಾ ಇನ್ನೇನು ಬೀಳುವುದರಲ್ಲಿತ್ತು. ಇಂತಹ ಅವಾಂತರಗಳನ್ನು ನಿರೀಕ್ಷಿಸದ ನಾನು ಗಾಬರಿಯಿಂದ ಕ್ಯಾಮಾರವನ್ನು ಮೇಲೆಳೆದು ವಾಪಸ್ ಬ್ಯಾಗಿಗೆ ತುರುಕುತ್ತಾ ಅದೇ ಬ್ಯಾಗಿನ ಮೇಲ್ಬಾಗದಲ್ಲಿಟ್ಟಿದ್ದ ನನ್ನ ರೇ-ಬ್ಯಾನ್ ಕನ್ನಡಕಕ್ಕಾಗಿ ತಡಕ ತೊಡಗಿದೆ. ಮೂಲತಹ ವಾಟಾಳ್ ನಾಗರಾಜರ ತರಹ ನಿತ್ಯ ಕನ್ನಡಕದಾರಿಯಲ್ಲದಿದ್ದರೂ, ಅಪರೂಪಕ್ಕೊಮ್ಮೆ ಶೋಕಿಗೆಂದು ಕನ್ನಡಕಗಳ ಬಗ್ಗೆ ಹೆಚ್ಚು ತಿಳಿದಿದ್ದ ಗೆಳಯ ಭಾನುವನ್ನು ಕಾಡೀ ಬೇಡಿ ಅವನ ಕೆಲಸದ ವೇಳೆಯಲ್ಲೇ ಎಳೆದೊಯ್ದು ಎಂ. ಜಿ. ರಸ್ತೆಯಲ್ಲಿ ಕೊಡಿಸಿಕೊಂಡಿದ್ದೆ.
ಬೆಂಗಳೂರಿನಿಂದ ಕಣ್ಣಂಚಿನಲ್ಲಿ ಇಟ್ಟುಕೊಂಡಿದ್ದ ತಂದಿದ್ದ ಕರಿಯ ಸಂಗಾತಿಯನ್ನು ಮುಂಬೈನಲ್ಲಿ ಕಳೆದುಕೊಂಡು ಮೂರ್ಖನಂತೆ ನಿರಾಸೆಯಿಂದ ರೈಲಿನಿಂದಿಳಿದು ಬಂದ ಕಡೆಗೆ ಕಣ್ಣು ಹಾಯಿಸಿದೆ. ಅಷ್ಟರಲ್ಲಿ ಅಣ್ಣ ಕಲೀಮ್ ಇನ್ನು ರೈಲಿನ ಬಾಗಿಲ ಬಳಿಯೇ ಇದ್ದು ಬಗ್ಗಿ ಏನನ್ನೋ ತೆಗೆದು ತನ್ನ ಪಕ್ಕದಲ್ಲಿದ್ದ ಆಸಾಮಿಗೆ ಕೊಡುತಿದ್ದರು, ಆ ಆಸಾಮಿಯ ಕೈ ಆ ವಸ್ತುವನ್ನು ತಲುಪುವದರೊಳಗೆ,, ಅದಾವ ವೇಗದಲ್ಲೋಗಿ ಅದನ್ನು ಕಿತ್ತುಕೊಂಡೆನೋ ತಿಳಿಯದು, ಆದರೆ ನನ್ನ ಪ್ರೀತಿಯ ಕರಿಯ ಕಣ್ ಸಂಗಾತಿ ಮರಳಿ ನನ್ನ ಕೈಗೆ ಬಂದಿತ್ತು. ಇಷ್ಟರಲ್ಲೇ ನಮ್ಮ ಹಿಂಡಿನವರೆಲ್ಲ ರೈಲಿನಿಂದಿಳಿದು ಬಂದರು. ನಾವು ಮಾಟುಂಗಾದ ಕರ್ನಾಟಕ ಸಂಘಕ್ಕೆ ಕಾಲ್ನೆಡಿಗೆಯಲ್ಲಿ ಹೊರಟೆವು. ಹೀಗೆ ನಮ್ಮ ಕಾಲುಗಳು ಕಾರ್ಯನಿರತವಾಗಲು ನಮ್ಮ ಬಾಯಿಗಳು ಸುಮ್ಮನಿರಬೇಕೆ? “ಏನಾದರಾಗಲಿ ಒಟ್ನಲ್ಲಿ ನಿನ್ ಕನ್ನಡ್ಕ ಸಿಕ್ತಲ್ಲ ಬಿಡು” ಎಂದು ಅಣ್ಣ ಸಮದಾನದ ಮಾತುಗಳನ್ನಾಡಿದರು. ಅದಕ್ಕೆ ಪ್ರತಿಯಾಗಿ ನನಗು ಈ ಕನ್ನಡಕಕ್ಕು ಇರುವ ಬಿಡಿಸಲಾಗದ ನಂಟನ್ನು ತೋರುವ ಇನ್ನೊಂದು ಸಂಗತಿಯನ್ನು ಹೇಳಲಾರಂಬಿಸಿದೆ…
ಅಂದೊಮ್ಮೆ ಗೆಳೆಯ ಮಂಜುಪ್ರಸಾದ್ ಇಂದಿರಾನಗರದ ನಮ್ಮ ರೂಂಗೆ ಬಂದಿದ್ದ. ರೈಲು ಬೋಗಿಯ ಕಾಲು ಭಾಗದಷ್ಟು ಚಿಕ್ಕದಾಗಿದ್ದು ನಾನು ನನ್ನ ಗೆಳಯ ಶಿವು ಇಬ್ಬರು ಕೈಕಾಲು ಜಾಡಿಸದೇ ಮಲಗಬಹುದಾಗಿದ್ದ ಪುಟ್ಟ ಬೆಂಕಿ ಪೊಟ್ಟಣದಂತ್ತಿತ್ತು, ಈ ರೂಂ. ಇದರಲ್ಲಿ ಅತಿಥಿಗಳು ಬಂದರೆ ನಮ್ಮ ತಿಥಿಯೇ ಆಗುತ್ತಿತ್ತು. ಹೇಗೋ ನಮ್ಮ ಈ ಕಿರಿಯ ಕೋಣೆಯಲ್ಲಿ ಸಿಗಬಹುದಾದ ಆಥಿತ್ತ್ಯವೆಲ್ಲ ಬಿಚ್ಚು ಮನಸ್ಸಿನಿಂದ ಸ್ವೀಕರಿಸಿ ಬೆಳಗೆದ್ದು ಆಫೀಸಿಗೆ ಹೊರಡುತಿದ್ದ ಗೆಳೆಯ ಮಂಜು, “ಬಾರೋ ನಾಗ್ಜಿ, ಹೋಗ್ತಾ ನಿನ್ನು ಆಫೀಸಿಗೆ ಬಿಟ್ಟೊಗ್ತೀನಿ” ಅಂತ ಉತ್ಸಾಹದಿಂದ ಕರೆದ. ಅವನ ಆಹ್ವಾನವನ್ನು ಮನಸಾರೆ ಒಪ್ಪಿ ಅವನ ಗಾಡಿಯ ಹಿಂಬದಿಯಲ್ಲಿ ಕುಳಿತೆ. ಮಂಜು ನಾನು ಒಂದೇ ಕಾಲೇಜಿನಲ್ಲಿ ಓದಿದವರಾದ್ದರಿಂದ ದಾರಿಯುದ್ದಕ್ಕೂ ಹರಟೆ ಕೊಚ್ಚಲು ನಮಗೆ ವಿಷಯಗಳ ಕೊರತೆ ಇರಲ್ಲಿಲ್ಲ. ನಾವು ಹೊರಡುವಾಗ ಮಾಘಿಕಾಲದ ಮಂಜನ್ನು ಮುಂಜಾನೆಯೇ ಎದ್ದು ತಿಳಿಗೊಳಿಸಿದ್ದ ಸೂರ್ಯನು ಸ್ವಲ್ಪ ಆರಾಮ ತೆಗೆದುಕೊಳ್ಳುತ್ತಿದ್ದಂತ್ತಿತ್ತು.
ಇಂದಿರಾನಗರದಿಂದ ಬನಶಂಕರಿಯನ್ನು ತಲುಪುವ ಆತುರದಲ್ಲಿದ್ದ ನಮಗೆ ಪದೇ ಪದೇ ಸಿಗುತಿದ್ದ ಕೆಂಪು ಸಿಗ್ನಲ್ಗಳು ರೇಜಿಗೆಯನ್ನುಂಟುಮಾಡ್ದಿದ್ದವು. ಪ್ರತಿ ಸಿಗ್ನಲ್ಲನ್ನು ಚಕ್ರವ್ಯೂಹ ಬೇಧಿಸಿದಂತೆ ಸೆಣೆಸುತ್ತಾ ಮುನ್ನುಗ್ಗುತ್ತಿದ್ದ ಮಿತ್ರನಿಗೆ ಡೈರಿ ವೃತ್ತದ ಬಳಿ ಕೆಂಪು ಸಿಗ್ನಲ್ ಸಿಕ್ಕು ನಿಲ್ಲಲೇಬೇಕಾಯಿತು. ಸೂರ್ಯನ ಪ್ರಭೆಯಿಂದ ಆಗಲೇ ಬೇಸತ್ತು ಹೋಗಿದ್ದ ನಾವು ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತ ನಿಂತ್ತಿದ್ದೆವು. “ಎ ರಾಜ” ಎಂಬ ಶಬ್ದ ನಮ್ಮ ಕಿವಿಗೆ ಸರಿಯಾಗಿ ತೂರಿರಲ್ಲಿಲ್ಲ ಅಷ್ಟರಲ್ಲೇ ಹಿಂಬದಿಯಿಂದ ಬಂದ ಚಪ್ಪಾಳೆಯ ಸದ್ದು ಕಿವಿಗೆ ಗುದ್ದಿದಹಾಗಾಯಿತು. ತನ್ನ ಅಂಗೈಯನ್ನು ಮುಂದೆ ಚಾಚಿ “ಕೊಡು” ಎಂಬಂತೆ ಒಬ್ಬ ಕೊಜಾ ನನ್ನ ಎಡಕ್ಕೆ ಬಂದು ನಿಂತಿದ್ದ.
ಈಗಲೇ ನಿಮಗಿದು ಹೇಳಿಬಿಡುವುದು ಉತ್ತಮ ಅನಿಸುತ್ತದೆ, ಏಕೆಂದರೆ ಮುಂದೆ ನನ್ನ ನಿಲುವು ಹೇಗಿರುತ್ತದೋ ಯಾರಿಗೆ ಗೊತ್ತು. ನನಗೆ ಕೊಜಾಗಳನ್ನು ಕಂಡರೆ ಒಂದು ರೀತಿಯ ಅಕ್ಕರೆ. ಒಮ್ಮೆ ‘ಡಿಸ್ಕವರಿ ಚಾನಲ್’ ನಲ್ಲಿ ಇವರ ಸಂಘ, ಜೀವನ ಶೈಲಿ ಹಾಗು ಉತ್ತರ ಭಾರತದ ವಿವಾಹಗಳಲ್ಲಿ ಇವರನ್ನು ವಿಶೇಷವಾಗಿ ಕರೆಸಿ ವಧು ವರರಿಗೆ ಆಶೀರ್ವಾದ ಕೊಡಿಸುವುದನ್ನು ಕಂಡಿದ್ದೆ. ಈ ಎಲ್ಲ ಸಂಗತಿಗಳ ಜೊತೆಗೆ ಕುಟುಂಬ, ಸಮಾಜ ಮತ್ತು ಸರ್ಕಾರಗಳಿಂದ ದೂರವಿಡಲ್ಪಟ್ಟಿರುವ ಈ ಪ್ರಜೆಗಳನ್ನು ಕಂಡರೆ ಒಂದು ರೀತಿಯ ಅಕ್ಕರೆ.
ಸದ್ಯಕ್ಕೆ ನನ್ನ ಪಕ್ಕ ಬಂದು ಹಣಕ್ಕಾಗಿ ನಿಂತಿರುವ ಈ ಜೀವಿಗೆ ಹೇಗೆ ಪ್ರತಿಕ್ರಿಯಿಸುವುದು? ಸರಿ… ಕಿಸಗೆ ಕೈಹಾಕಿ ಚಿಲ್ಲರೆಗಾಗಿ ತಡಕಿದೆ, ಚಿಲ್ಲರೆ ಇರುವಹಾಗೆ ಕಾಣಲಿಲ್ಲ. ಬೇಸರದ ಮುಖಮಾಡಿ ಚಿಲ್ಲರೆ ಇಲ್ಲ ಎಂದೆ…. “ಚಿಲ್ಲ್ರೆ ಯಾಕೋ ಮಾಮ… ನೋಟೇ ಕೊಡ” ಅನ್ನಬೇಕೆ… ಸರಿ! ನೋಟು ಇಲ್ಲ ಅಂದೆ. ಅದಕ್ಕೆ ಆಕೆ (ವಸ್ತ್ರಾಲಂಕಾರನದಿಂದಾ ಹೆಂಗಸಂತೆ ಕಾಣುತ್ತಿದ್ದರಿಂದ “ಆಕೆ” ಎನ್ನಬೇಕಷ್ಟೇ) “ಕನ್ನಡ್ಕ ಕೊಡ ಒಂದ್ ಸರಿ ಹಾಕಿ ನೋಡ್ತಿನಿ” ಎಂದಳು. ಮೊದಲೇ ಹೇಳಿದ ಹಾಗೆ ಗೌರವ ಅಕ್ಕರೆಗಳು ನನ್ನಾವರಿಸಿ ನನ್ನ ಕರಿಯ ಸಂಗಾತಿಯನ್ನು ತೆಗೆದು ಆಕೆಯ ಕೈಗಿಟ್ಟೆ. ಅಲ್ಪನಿಗೆ ಸಿಕ್ಕ ಮಹದೈಶ್ವರ್ಯದಂತೆ ನನ್ನ ಕನ್ನಡಕವನ್ನು ತನ್ನ ಕಣ್ಣಿಗೀರಿಸಿ ಕುರುಡನಿಗೆ ಕಣ್ಣು ಬಂದಂತೆ ತನ್ನ ಸುತ್ತಲಿದ್ದ ಜಗತ್ತನ್ನು ದಿಟ್ಟಿಸುತ್ತ ಮತ್ತೊಮ್ಮೆ “ತೆಗಿಯೋ ಮಾಮ ದುಡ್ನಾ…” ಎಂದಳು.
ಮುಂದೆ ಬರಲಿರುವ ಕೆಲವು ಕ್ಷಣಗಳು ನನ್ನ ಜೀವನದ ಅತಿ ಮುಖ್ಯವಾದ ಹಾಗು ಈ ಲೇಖನವನ್ನು ಬರೆಯುವಂತೆ ಪ್ರೇರೇಪಿಸಬಹುದಾದ ಕ್ಷಣಗಳೆಂದು ನನಗೆ ಆಗ ಅನಿಸಿರಲಿಲ್ಲ. ಹೀಗೆ ಕಂಡವರ ಕಣ್ಣೇರಿದ ನನ್ನ ಕನ್ನಡಕವನ್ನು ನೋಡಿ ಮನಸ್ಸಿಗಿಡಿಸದೇ ಹಿಂತಿರುಗಿ ಕೊಡುವಂತೆ ಕೇಳಿದೆ. ಆಕೆ ನನ್ನ ಮಾತನ್ನೂ ಲಕ್ಕಿಸದೆ ಭಿಕ್ಷೆಗಾಗಿ ಮುಂದೆ ಸಾಗಿದಳು. ನಾನು ಗಾಡಿಯಿಂದ ಜಿಗಿದು ಆಕೆಯನ್ನು ಹಿಂಬಾಲಿಸುತ್ತಾ “ಅಕ್ಕ ನನ್ನ ಕನ್ನಡಕ ಕೋಡಿ” ಎಂದು ಆಕೆಯ ಹಿಂದೆ ಕನ್ನಡಕ ಭಿಕ್ಷೆ ಬೇಡುತ್ತಾ ಹೊರಟೆ!
ಭಿಕ್ಷೆ ಬೇಡುತ್ತಾ ಮುಂದೆ ಸಾಗುತ್ತಿದ್ದ ಆಕೆಯನ್ನು ಹಿಂಬಾಲಿಸುತ್ತಿದ್ದ ನನ್ನನ್ನು ನೋಡಿ ನಗಲಾರಬಿಸ್ಸಿದ್ದ ಜನರನ್ನು ಕಂಡು ಬೇಸರವಾಗಿದ್ದ ನಾನು ” ಅದು ತುಂಬಾ ಕಾಸ್ಟ್ಲಿ ಕನ್ನಡಕ ವಾಪಸ್ ಕೊಡಕ್ಕಾ” ಎಂದು ಸ್ವಲ್ಪ ಸಿಟ್ಟಿನಿಂದ ಕೇಳಿದೆ. “ಜೇಬ್ನಾಗೆ ಮೂರ್ಕಾಸಿಲ್ಲ ಮೂಗ್ಮ್ಯಲೇ ಮೂರ್ಸಾವ್ರುಪಾಯಿ ಕನ್ನಡ್ಕ ಹಾಕ ಮೂತಿ ನೋಡು” ಅಂತ ಚುಡಾಯಿಸಿ ಬಿಟ್ಟಳು. ಒಮ್ಮೆ ಯೋಚಿಸಿ ನೋಡಿದರೆ, ಕನ್ನಡಕ ಆಕೆಗೇ ಉಪಯುಕ್ತವಾಗುವಂತ್ತಿತ್ತು. ದಿನವಿಡೀ ಬಿಸಿನಲ್ಲಿ ನಿಂತು ಭಿಕ್ಷೆ ಬೇಡುತ್ತಿದ್ದ ಅವಳ ಕಣ್ಣಿಗೆ ನನ್ನ ಕರಿಯ ಸಂಗಾತಿಯಿಂದ ಸ್ವಲ್ಪವಾದರೂ ತಂಪು ಸಿಗುತ್ತಿತ್ತಲ್ಲವೇ.
ಆದರೂ ಶ್ರೀಸಾಮಾನ್ಯನಾದ (ನಾನು ನನ್ನದು ತುಂಬಿಕೊಂಡಿರುವ) ನಾನು, ನನ್ನ ಕನ್ನಡಕವನ್ನು ಬಿಡಲು ತಯಾರಿರಲ್ಲಿಲ್ಲ. ಬೆಂಗಳೂರಿನ ಬ್ಯುಸಿ ಟ್ರಾಫಿಕ್ಕೀನ ಮದ್ಯೆ “ನನ್ ಕನ್ನಡ್ಕ ಕೊಡ್ತಾಳೋ, ಕೊಡಲ್ವೋ ಎಂಬ ದ್ವಂದ್ವದಲ್ಲಿ ಒದ್ದಾಡುತ್ತಿದ್ದ ನನಗೆ ಮತ್ತೊಮ್ಮೆ “ಏ ಮಾಮ” ಎಂಬ ದ್ವನಿ ಕೇಳಿಸಿತು. ತಿರುಗಿ ನೋಡಿದರೆ ಕನ್ನಡ್ಕ ಹಿಡಿದ ಕೈ ತೊಗೋ ಎಂಬಂತೆ ಮುಂದೆ ಚಾಚಿತ್ತು. ಕನ್ನಡಕವನ್ನು ಮರಳಿ ಪಡೆದು ಸಮಾದಾನದ ನಿಟ್ಟುಸಿರು ಬಿಡುತ್ತಾ ಮಂಜುವನ್ನು ಹುಡುಕತೊಡಗಿದೆ…..ಗ್ರೀನ್ ಸಿಗ್ನಲ್ ಸಿಕ್ಕು ಮಂಜು ಗಾಡಿಯನ್ನು ಮುಂದೆ ಹೊಯ್ದು ನಿಲ್ಲಿಸ್ಸಿದ್ದರು. ಕೈಗೆ ಮರಳಿಬಂದ ಕರಿಯ ಸಂಗಾತಿಯನ್ನು ಮತ್ತೆ ಕಣ್ಣಿಗೇರಿಸಿ ನನಗಾಗಿ ಕಾಯುತ್ತಾ ನಿಂತಿದ್ದ ಮಂಜೂ ಗಾಡಿಗೆ ಜಿಗಿದೆ! ಮೊದಲೇ ಹೇಳಿದ ಹಾಗೆ ಹರಟಲು ಬಹಳ ವಿಷಯವಿದ್ದರೂ ಈ ಘಟನೆಯೊಂದೆ ದಾರಿಯನ್ನು ಸವೆಸುವಸ್ಟಿತ್ತು.
ಮಾತು ಮಾತಲ್ಲೇ, ಮಾಟುಂಗ ರೈಲು ನಿಲ್ದಾಣದಿಂದ ಕರ್ನಾಟಕ ಸಂಘಕ್ಕೆ ಬಂದು ಸೇರಿದ್ದೆವು. ನನಗು ನನ್ನ ಕರಿಯ ಕಣ್ಣುಸಂಗಾತಿಗು ಇರುವ ನಂಟನ್ನು ಹಾಗು ಅದನ್ನ ಕಳಕೊಂಡು ಪಡಕೊಂಡ ಸಂಗತಿಯನ್ನು ಕೇಳಿ ಹಿಂಡಿನವರೆಲ್ಲ ಮನಸಾರೆ ನಕ್ಕರು. ಈಗಲೂ ಒಮ್ಮೊಮ್ಮೆ ನನ್ನ ಗೆಳೆಯರು “ಏ ರಾಜಾ” ಎಂದು ಕಾಲೆಳೆಯುತ್ತಾ ಆ ಘಟನೆಯನ್ನು ಮೆಲುಕುಹಾಕುತ್ತಾರೆ.
ಲೇಖನ-ಚಿತ್ರ: ನಾಗ್ಜ್