ಕೇದಾರ ಕಾಂಟ್

-

ಇಲ್ಲಿಂದ ಮುಂದಕ್ಕೆ ಕಾಲು ದಾರಿಗಳು ಬಿಟ್ಟರೆ ಬೇರೆ ನಾಗರಿಕ ದಾರಿಗಳೇ ಇಲ್ಲ. ಈ ಕಾಲು ದಾರಿಯಲ್ಲಿ ಹನ್ನೆರಡು ಕಿಲೋ ಮೀಟರ್ ನಡೆದರೆ ತಾಲೂಕ ಎಂಬ ಹಳ್ಳಿ ಸಿಗುತ್ತದೆ. ಇದೇ ಭಾರತ ದೇಶದ ಗಡಿಯ ಕೊನೆಯ ಹಳ್ಳಿ. ಅಲ್ಲಿಂದ ಮುಂದೆ ಪರ್ವತಗಳಾಚೆಗಿರುವ ದೇಶವೇ ಚೀನಾ. ಈ ಊರಿನ ಬೆನ್ನ ಹಿಂದೆ ವಿಸ್ತಾರವಾಗಿ ಮಲಗಿರುವ ಗಗನದೆತ್ತರದ ಪರ್ವತವೇ “ಕೇದಾರ ಕಾಂಟ್“

ಇಲ್ಲಿ ನಿಂತು ಎತ್ತ ಕತ್ತು ತಿರುಗಿಸಿ ನೋಡಿದರೂ ಬರೀ ಹಿಮಾಲಯ ಶ್ರೇಣಿಯ ಮುಗಿಲೆತ್ತರದ ಪರ್ವತಗಳು ಎದ್ದು ಕಾಣುತ್ತವೆ. ಹಿಮದ ಕಂಬಳಿ ಹೊದ್ದುಕೊಂಡು, ಮೋಡಗಳ ಮೆತ್ತಿಕೊಂಡು ಕ್ಷಣಕ್ಷಣಕ್ಕೂ ಮಂಜಿನ ಹೊಗೆಯಲ್ಲಿ ವೇಷ ಬದಲಿಸುವ ¸ಸ್ವಗರ್ರೋಹಿಣಿ, ಕಾಲಾನಾಗ್, ಹರ್ಕಿ ಧುನ್, ಪರ್ವತಗಳ ಸೊಬಗೇ ಇಲ್ಲಿ ವೈಶಿಷ್ಟ. ಈ ಪರ್ವತಗಳ ನೆತ್ತಿಯಿಂದ ಕರಗಿದ ಮಂಜು ನದಿಯಾಗಿ ಈ ಊರಿನ ಬುಡದಲ್ಲೇ ಭೋರ್ಗರಿಯುತ್ತಿರುತ್ತದೆ. ಮಹಾಭಾರತ ಕಾಲದಲ್ಲಿ ಧರ್ಮರಾಯ ಹಾಗು ಆತನ ಪರವಾರ ಇದೇ ¸ಸ್ವಗರ್ರೋಹಿಣಿ ಪರ್ವತಕ್ಕೆ ಬಂದು ನೆಲೆಸಿ ಮೋಕ್ಷ ಪಡೆದುಕೊಂಡರೆಂಬುದಾಗಿ ಇಲ್ಲಿಯ ಜನ ಇಂದಿಗೂ ನಂಬುತ್ತಾರೆ.
ಈ ಸಂಕ್ರಿ ತನಕ ಬಸ್ಸಿನಲ್ಲಿ ಬರುವುದೇ ಒಂದು ಯಮಸಾಹಸ. ನಾನಾ ಬಗೆಯ ಭೀಮಾಕಾರದ ಪರ್ವತಗಳ ಮಗ್ಗುಲಗಳ ಸೀಳಿ ನಿಮರ್ಿಸಲಾದ ಕಲ್ಲು-ಮಣ್ಣಿನ ಹಸಿ ರಸ್ತೆ, ಹಾಗು ಅದರ ಅಪಾಯಕಾರಿ ತಿರುವುಗಳಲ್ಲಿ ಪ್ರಯಾಣ ಮಾಡುವಾಗ ಒಳಗಿನ ಜೀವ ಬಾಯಿಗೇ ಬಂದಿರುತ್ತದೆ. ಹೀಗಾಗಿ ಬಸ್ಸು ನಮ್ಮೆಲ್ಲರ ಪರಿಸ್ಥಿತಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕಿತ್ತು. ಹೀಗಾಗಿ ಏನೋ ರಸ್ತೆ ಮಧ್ಯೆ ಆಕ್ಸಿಡೆಂಡಾಗಿ ಬಿದ್ದವರು ಆಸ್ಪತ್ರೆಗೆ ಅಡ್ಮೀಟ್ ಆಗಲು ಕೊಸರಾಡಿಕೊಂಡು ಇಳಿಯುವವರಂತೆ, ನಾವೂ ಸಹ ಒಬ್ಬೊಬ್ಬರಾಗಿ ಸೊಂಟ, ಕೈ ಕಾಲುಗಳ ಹಿಡಿದುಕೊಂಡು ಅಬ್ಬಬ್ಬಾ ಎಂದು ಬಸ್ಸಿನಿಂದ ಕೆಳಗಿಳಿದು ನಿಟ್ಟುಸಿರು ಚೆಲ್ಲಿದೆವು. ನಮ್ಮನ್ನು ಸ್ವಾಗತಿಸಲು ಆ ಬೇಸ್ಕ್ಯಾಂಪಿನಲ್ಲಿ ವೈ.ಹೆಚ್.ಎ.ಐ.ನ (ಯೂತ್ ಹಾಸ್ಟೆಲ್ ಅಸೋಷಿಯೇಶನ್ ಆಪ್ ಇಂಡಿಯಾ.ನವದೆಹಲಿ). ಇದರ ಅಧಿಕಾರಿಗಳು ಕಾಯುತ್ತಿದ್ದರು. ನಮ್ಮನ್ನು ಪ್ರೀತಿಯಿಂದ ಮಾತಾಡಿಸಿ ಚಹ ಕೊಟ್ಟು ನಮಗಾಗಿ ಹೆಣೆಯಲಾಗಿದ್ದ ಗುಡಾರಗಳನ್ನು ತೋರಿಸಿದರು. ನೆಲ ಸಿಕ್ಕಿದ್ದೇ ತಡ ನಾ ಮುಂದು ತಾ ಮುಂದು ಎಂದು ಕೈ-ಕಾಲುಗಳ ಚೆಲ್ಲಿಕೊಂಡೆವು.

ವೈ.ಹೆಚ್.ಎ.ಐ.ನ ದೆಹಲಿ ಶಾಖೆಯವರು ಪ್ರತಿ ವರ್ಷದ ಮೇ ಹಾಗೂ ಜೂನ್ ತಿಂಗಳಲ್ಲಿ ಇದೇ ಸಂಕ್ರಿ ಬೇಸ್ಕ್ಯಾಂಪಿನಿಂದ `ನ್ಯಾಷನಲ್ ಹಿಮಾಲಯನ್ ಟ್ರಕ್ಕಿಂಗ್ ಎಕ್ಸಪೆಡೀಶನ್ ಎಂಬ ಚಾರಣವನ್ನು ಕೇದಾರಕಾಂಟ ಪರ್ವತಕ್ಕೆ ಏರ್ಪಡಿಸುತ್ತಾರೆ. ಒಂದು ವಾರದ ಈ ಚಾರಣದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಈ ವರ್ಷದ ಟ್ರಕ್ಕಿಂಗ್ನಲ್ಲಿ ನಮ್ಮದು ಒಂಭತ್ತನೇ ತಂಡವಾಗಿತ್ತು.

ಈ ವರ್ಷದ ಮೊದಲ ಚಾರಣ ತಂಡ ನಮಗಿಂತ ಎಂಟು ದಿನ ಮೊದಲೇ 12500 ಅಡಿ ಎತ್ತರದಲ್ಲಿರುವ ಹಿಮಾಲಯದ ಕೇದಾರಕಾಂಟ ಪರ್ವತಕ್ಕೆ ಹೋಗಿತ್ತು. ನಾವು ಬೇಸ್ ಕ್ಯಾಂಪ್ ತಲುಪಿದ ದಿನವೇ ಆ ತಂಡದವರು ತಮ್ಮ ನಡಿಗೆಯನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದಿದ್ದರು. ಹಿಮಾಲಯದಲ್ಲಿ ಕ್ಷಣಕ್ಷಣಕ್ಕೂ ಬದಲಾಗುವ ಹವಾಮಾನದ ವೈಪರೀತ್ಯ ಅವರನ್ನೂ ಕಂಗೆಡಿಸಿತ್ತು. 21 ಜನರ ಆ ತಂಡ ಒಂದಿಷ್ಟು ಅಡ್ಡಿ ಆತಂಕಗಳನ್ನು ಅನುಭವಿಸಿಯೂ ಸುಖವಾಗಿ ಹಿಂತಿರುಗಿದ್ದ ಕಾರಣ ಬಹಳ ಸಂತೋಷದಿಂದಿತ್ತು.

ಆದರೆ, ಜೀವನದಲ್ಲಿ ಮೊದಲ ಸಲ ಹಿಮದ ಮೇಲೆ ನಡೆದಾಡಲು, ವಾರಗಟ್ಟಲೆ ಸುರಿಯುವ ಮಳೆ-ಚಳಿಗಾಳಿ, ಹಿಮಪಾತಗಳಲ್ಲಿ ಪಿಕ್ನಿಕ್ ಅನುಭವಿಸಲು ಬಂದಿದ್ದ ನಾವೆಲ್ಲರೂ ಮಾತ್ರ ನಿಜವಾಗಿಯೂ ಹೆದರಿಕೊಂಡಿದ್ದೆವು. ಆದರೆ, ಹೆದರಿಕೆಯಾಗುತ್ತಿದೆ ಎಂದು ಯಾರೂ ಯಾರಿಗೂ ಬಾಯಿ ಬಿಟ್ಟು ಮಾತ್ರ ಹೇಳಿಕೊಳ್ಳುತ್ತಿರಲಿಲ್ಲ. ಒಳಗೊಳಗೇ ನಡುಗುತ್ತಾ ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದವು. ಆದಷ್ಟು ಮೊದಲು ನಮ್ಮ ಪುಕ್ಕಲುತನ ಕಳೆದುಕೊಂಡು ಒಂದಿಷ್ಟು ದೈರ್ಯ ಸಂಗ್ರಹಿಸಿಕೊಳ್ಳಲು ವಿಜಯಿಗಳಾಗಿ ಹಿಂತಿರುಗಿದ ಮೊದಲ ಚಾರಣ ತಂಡದವರ ಅನುಭವಗಳನ್ನು ಕೇಳಿದರೆ ಹೇಗೆಂದು ನಿರ್ಧರಿಸಿಕೊಂಡೆವು. ಅವರ ಅನುಭವ ನಮ್ಮ ಅನೇಕ ಅಪೂರ್ಣ ಸಿದ್ಧತೆಗಳ ಪರಿಪೂರ್ಣತೆಗೆ ಅತ್ಯಗತ್ಯವಾಗಿತ್ತು.

ಅದೃಷ್ಟಕ್ಕೆ ಅವರಲ್ಲಿ ಕೆಲವರು ಮೈಸೂರಿನಿಂದ ಬಂದಿದ್ದ ಒಂದಿಷ್ಟು ಕನ್ನಡದ ಗೆಳೆಯರಿದ್ದರು. ಕನ್ನಡ ಮಾತಾಡುವ ಅವರನ್ನು ಆ ಪರದೇಶಿ ನೆಲದಲ್ಲಿ ಕಂಡಾಗ ಮೈ ಪರಚಿಕೊಳ್ಳುವಷ್ಟೇ ಸಂತೋಷ ನಮಗಾಯಿತು. ಅತಿಸಲುಗೆ ನಾಲಿಗೆಗೆ ಏರಿಸಿಕೊಂಡ ನಾವು ಆದಷ್ಟು ಭಯಾನಕ ಅನುಮಾನಗಳನ್ನೇ ಲೋಡು ಮಾಡಿಟ್ಟುಕೊಂಡು ಅವನ್ನೆಲ್ಲಾ ನೂರಾರು ಪ್ರಶ್ನೆಗಳಾಗಿ ಹೊಸೆದುಕೊಂಡು ಅವರೆಲ್ಲರ ತಲೆ ತಿನ್ನಲು ಸಿದ್ಧ್ದವಾದೆೆವು. ಅವರಲ್ಲಿ ಕೆಲವರು ಪಾಪ ಒಳ್ಳೆಯವರು ನಮಗೆಲ್ಲಾ ದೈರ್ಯ ಹೇಳಿ ಹೋಗಿ ಬನ್ನಿ ಏನೂ ಆಗಲ್ಲ ಎಂದು ಸ್ವಾಮೀಜಿಗಳಂತೆ ಹರಸಿದರು. ಇನ್ನು ಕೆಲವರು ಅಂತವರಲ್ಲ. ಅವರು ಸಿಕ್ಕಿದ್ದೇ ಚಾನ್ಸ್ ಅಂತ ಬರೀ ದುರಂತದ, ಜಾರಿ ಬೀಳುವ ಅಪಾಯದ ಅನೇಕ ಘಟನೆಗಳನ್ನೇ ಆದಷ್ಟು ಎಳೆದೆಳೆದು ಹೇಳಿ ನಮ್ಮ ಪುಕ್ಕಲುತನವನ್ನು ಮತ್ತಷ್ಟು ಹೆಚ್ಚಿಸಿ ಬಿಟ್ಟರು. ಹೋಗಿಯಾದ ಮೇಲೆ ನಾವು ಸುತಾರಾಂ ಅಲ್ಲಿಂದ ಹಿಂತಿರುಗುವಂತಿರಲಿಲ್ಲ. ಹೀಗಾಗಿ, ಆಗಿದ್ದಾಗಲಿ ಹಿಮಾಲಯ ಹತ್ತೊಣವೆಂದು ಎಲ್ಲರೂ ಪರಸ್ಪರ ಸಮಾಧಾನ ಹೇಳಿಕೊಂಡು ಸುಮ್ಮನಾದೆವು.

ಮಾರನೆಯ ದಿನ ವೈ.ಹೆಚ್.ಎ.ಐ.ನವರು ನೀಡಿದ ತರಬೇತಿ ನಮಗೆಲ್ಲಾ ಒಂದಿಷ್ಟು ದೈರ್ಯ ತುಂಬಿತು. ಅದಾದ ನಂತರ 3ನೇದಿನ ಬೆಳಗ್ಗೆ ನಮ್ಮ ಚಾರಣ ಆರಂಭವಾಯಿತು. ನಮ್ಮ ವಾರದ ಚಾರಣದುದ್ದಕ್ಕೂ ನಮಗೆ ಹಲವಾರು ನುರಿತ ಗೈಡ್ಗಳನ್ನು ಅವರು ಒದಗಿಸುತ್ತಾ ಹೋದರು. ಆ ಮಾರ್ಗದರ್ಶಕರ ಮೂಲಕ ಹಿಮಾಲಯದ ಕಾಡಿನ ಗಿಡ,ಮರ,ಹೂವು,ಹಣ್ಣು,ಪ್ರಾಣಿ-ಪಕ್ಷಿಗಳ ಸೊಬಗನ್ನು ಸವಿಯುತ್ತಾ ಹೋದೆವು. ಜೊತಗೆ ನಾಗರಿಕ ಬದುಕಿನಿಂದ ದೂರವಾಗಿ ಸದಾ ಹಿಮಪಾತದ ಗ್ಲೇಸಿಯರ್ ಲೋಕದಲ್ಲಿ ದೈರ್ಯವಾಗಿ ಬದುಕುವ ಪಹಾಡಿ ಜನ ಹಾಗೂ ಗುಜ್ಜಾರ್ ಜನರ ಬದುಕಿನ ಕಷ್ಟ-ಕಾರ್ಪಣ್ಯಗಳನ್ನು ತುಂಬಾ ಹತ್ತಿರದಿಂದ ನೋಡುತ್ತಾ ತಿಳಿಯುತ್ತಾ ಹೋದೆವು.

ಹಿಮಾಲಯದ ತಪ್ಪಲಿನಲ್ಲಿ ಎತ್ತ ತಿರುಗಿದರೂ ಹಸಿರು ಮಡಿಲಿನ ತುಂಬ ಹೂವಿನ ರಾಶಿ ಸೂರೆಯಾಗಿರುವುದನ್ನು ನೋಡಬಹುದು. ಪರ್ವತದೆತ್ತರಕ್ಕೆ ಹೋಗುತ್ತಾ ಹೋದಂತೆ
ಕಾಡು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಬೋಳು ಕಲ್ಲಿನ ಬೆಟ್ಟಗಳು ಅವುಗಳ ಮೇಲೆ ಸುರಿದ ರಾಶಿ ಐಸಿನ ಗುಪ್ಪೆಗಳು ಎದ್ದು ನಿಲ್ಲುತ್ತವೆ. ಪರ್ವತದ ಎತ್ತರ ಹೆಚ್ಚಾದಂತೆ ಆಮ್ಲಜನಕ ಕೊರತೆ ಎದುರಾಗುತ್ತದೆ. ಆಗ ಬೆಟ್ಟಹತ್ತಲು ಜೊತೆಜೊತೆಗೆ ಉಸಿರಾಡಲು ಶಕ್ತಿ ಮೀರಿ ತಿಣುಕಾಡಬೇಕಾಗುತ್ತದೆ.

ಇನ್ನೇನು ಈ ಬೆಟ್ಟ ಹತ್ತಿದರೆ ಇವತ್ತಿನ ಚಾರಣ ಮುಗೀತಪ್ಪ ಅಂದುಕೊಳ್ಳುವಾಗಲೇ ಮತ್ತೊಂದು ಹತ್ತಬೇಕಾದ ಪರ್ವತ ಕಣ್ಣ ಮುಂದೆ ನಿಲ್ಲುತ್ತಿತ್ತು. ಬೆನ್ನ ಮೇಲಿನ ಬಾರದ ಬ್ಯಾಗುಗಳು ಬರುಬರುತ್ತಾ ಬೇತಾಳವಾಗತೊಡಗಿದವು. ದಿನಾ ಹತ್ತು-ಹದಿನೈದು ಕಿಲೋ ಮೀಟರ್ನಷ್ಟು ಕಾಲು ನಡಿಗೆ ಇರುತ್ತಿತ್ತು. ಪ್ರತೀ ದಿನ ಸಂಜೆಯ ಹೊತ್ತಿಗೆ ನಮಗಾಗಿ ಕಟ್ಟಲಾದ ಒಂದೊಂದು ಹೊಸ ಕ್ಯಾಂಪಿನ ಬುಡಕ್ಕೆ ಬಂದು ಉಸ್ಸಪ್ಪ ಎಂದು ಉರುಳಿ ಬೀಳುತ್ತಿದ್ದ್ದೆವು.

ದಿನದಿನವೂ ನಮಗಾಗಿ ಅಚ್ಚುಕಟ್ಟಾದ ಊಟ ತಿಂಡಿ ಟೀ ವ್ಯವಸ್ಥೆಯನ್ನು ಅಧಿಕಾರಿಗಳು ಮೊದಲೇ ಸಿದ್ದಮಾಡಿಟ್ಟಿರುತ್ತಿದ್ದರು. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಹಾಡು ಹೇಳುವ, ಮಿಮಿಕ್ರಿ ಮಾಡುವ ಕಾರ್ಯಕ್ರಮ ನಾವೇ ನಡೆಸಿಕೊಡಬೇಕಾಗಿತ್ತು. ಹಿಮದ ಮಳೆ ಸುರಿದ ದಿನ ರಾತ್ರಿ ಚಳಿ ವಿಪರೀತವಾಗಿರುತ್ತಿತ್ತು. ಗಡಗಡ ನಡುಗುತ್ತಾ ಅವರು ಕೊಟ್ಟ ಎಲ್ಲಾ ರಗ್ಗುಗಳನ್ನು ಸುತ್ತಿಕೊಂಡು ಬಿದ್ದುಕೊಂಡರೂ ಚಳಿ ಮಾತ್ರ ಗ್ರಹಚಾರ ಬಿಡಿಸುವುದನ್ನ ಮಾತ್ರ ಯಾವ ದಿನವೂ ಮರೆಯುತ್ತಿರಲಿಲ್ಲ.

ಮಂಜಿನ ಮೇಲೆ ನಡೆಯುವುದೇ ಇಲ್ಲಿನ ರೋಚಕ ಅನುಭವ. ಕೆಲವು ಸಲ ಮಂಜಿನ ಚಳಿ ಗಾಳಿ ಅಂದಾದುಂಧಿಯಾಗಿ ಬೀಸತೊಡಗುತ್ತದೆ. ಆಗ ಹಿಮಪಾತವಾಗುವುದು, ಆಲಿಕಲ್ಲಿನ ಮಳೆ ಜಡಿಯುವುದು ಇಲ್ಲಿ ಸರ್ವೇ ಸಾಮಾನ್ಯವಾದ ಸಂಗತಿ. ಈ ಅನುಭವ ಆನಂತರ ಖುಶಿ ಎನಿಸಿದರೂ ಅನುಭವಿಸುವಾಗ ಮಾತ್ರ ಜೀವ ಹಾರಿ ಹೋಗಿರುತ್ತದೆ.

ಇಲ್ಲಿನ ಶುದ್ದ ಗಾಳಿ, ದಿನ ನಿತ್ಯದ ಕಠಿಣ ನಡಿಗೆ, ನಿಯಮಿತ ಆಹಾರ ನಿದ್ದೆಗಳು ನಮ್ಮೊಳಗಿನ ಸೋಮಾರಿತನ, ಕಳೆದು ಹೊಸ ಚೈತನ್ಯವನ್ನು ಎರಡೇ ದಿನದಲ್ಲಿ ನೀಡಿರುತ್ತವೆ. ಮನೆಯಲ್ಲಿ ಹಾಯಾಗಿ ತಿಂದು ತೂಕಡಿಸಿ ಕಾಲಹಾಕಿದ್ದ ನಮ್ಮೆಲ್ಲರ ದೇಹಗಳು ಒಂದು ವಾರ ಕಳೆದಾಗ ಐದಾರು ಕೆಜಿ ತೂಕ ಕಳೆದುಕೊಂಡು ನಳನಳಿಸುತ್ತಿದ್ದವು. ಮನಸ್ಸಿನಲ್ಲಿ ಆತ್ಮವಿಶ್ವಾಸ, ದೈರ್ಯ ಹೆಚ್ಚಾಗಿರುವುದು ಅರ್ಥವಾಗುತ್ತಿತ್ತು. ಒಂದೇ ಬೇಸರವೆಂದರೆ ಚಳಿ ಗಾಳಿಗೆ ಸಿಕ್ಕು ತತ್ತರಿಸಿದ ನಮ್ಮ ಮುಸುಡಿಗಳು ಮಾತ್ರ ಯಾರೂ ಕಂಡು ಹಿಡಿಯದಷ್ಟು ಕುಲಗೆಟ್ಟು ಹೋಗಿದ್ದವು.

ಕಲೀಮ್ ಶಿವಮೊಗ್ಗ.

LEAVE A REPLY

Please enter your comment!
Please enter your name here

Have a Story? Share it!

GET INSPIRED

We feature inspiring stories on Indian Travel, Art & Culture. Get our stories right into your mail box. Aie Shapat NO SPAMS!